ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಗದಗ:

ಇಂಡಿಯನ್ ಪ್ರಿಮೀಯರ್ ಲೀಗ್ ಆರಂಭಗೊಂಡಿದ್ದು, ಬೆಟ್ಟಿಂಗ್ ದಂಧೆ ಸದ್ದು ಮಾಡುತ್ತಿದೆ. ಜಿಲ್ಲೆಯ ಎಲ್ಲೆಂದರಲ್ಲಿ ಬೆಟ್ಟಿಂಗ್ ಮಾತುಗಳೇ ಕೇಳಿ ಬರುತ್ತಿವೆ. ಸುಲಭವಾಗಿ ಹಣ ಸಂಪಾದಿಸಲು ಜನ ಜೂಜಾಟಕ್ಕೆ ಇಳಿಯುತ್ತಿದ್ದಾರೆ. ಹೀಗೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡಿದ್ದವರ ಮೇಲೆ ರೋಣ ಹಾಗೂ ಗಜೇಂದ್ರಗಡ ಪೊಲೀಸರು ಪ್ರತ್ಯೇಕ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರೋಣ ತಾಲೂಕಿನ ಹೊಳೆಆಲೂರ ಕ್ರಾಸ್‌ನಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದ ಸೋಡಾ ವ್ಯಾಪಾರಿ ಹೊಳೆಆಲೂರ ಗ್ರಾಮದ ಹರೀಶ ತನುಷಾ ಪವಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸನ್‌ರೈಜರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯಕ್ಕೆ ಕ್ರಿಕೆಟ್ ಬೆಟ್ಟಿಂಗ್ ವಿಧವಾದ ಒನ್ ಟು ಡಬಲ್ ರೇಟ್ 500 ರೂ. ಆಡಿದರೆ 1,000 ರೂ. ಹಣ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಳ್ಳುವ ವೇಳೆ ಹರೀಶ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಬೆಟ್ಟಿಂಗ್‌ಗೆ ಬಳಸಲಾಗಿದ್ದ 10 ಸಾವಿರ ರೂ. ಮೌಲ್ಯದ ಮೊಬೈಲ್, 2360 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದರಂತೆ, ಗಜೇಂದ್ರಗಡ ಪಟ್ಟಣದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮುಂದೆ ಸನ್‌ರೈಜರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ಆಡುವ ವೇಳೆ ಪೊಲೀಸರ ಬಲೆಗೆ ಬಿದ್ದ ಮೀನು ವ್ಯಾಪಾರಿ ಮಂಜುನಾಥ ಹಂಪಣ್ಣ ರಾಠೋಡ ಅವನಿಂದ 3,200 ರೂ. ನಗದು ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಮಂಜುನಾಥ ರಾಥೋಡ 1,000ಕ್ಕೆ 1,200 ರೂ. ಕೊಡುವುದಾಗಿ ಕ್ರಿಕೆಟ್ ಬೆಟ್ಟಿಂಗ್‌ಗೆ ಜನರನ್ನು ಆಹ್ವಾನಿಸುವ ವೇಳೆ ತಗುಲು ಹಾಕಿಕೊಂಡಿದ್ದಾನೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ