ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗುರುವಂದನೆ ಎಂದರೆ ನಮಗೆ ಜ್ಞಾನ, ವಿದ್ಯೆ ಹಾಗೂ ಸಂಸ್ಕಾರವನ್ನು ನೀಡಿದ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಸಂಪ್ರದಾಯವಾಗಿದ್ದು, ಭಾರತೀಯ ಗುರು-ಶಿಷ್ಯ ಪರಂಪರೆಯ ಶ್ರೇಷ್ಠ ಸಂಕೇತವಾಗಿದೆ ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಚನ್ನಬಸವ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುಗಳು ಬದುಕಿನ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕು ನೀಡುವವರು. ನೈತಿಕತೆ, ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವ ಗುರುಗಳು ತಂದೆ-ತಾಯಿಯ ನಂತರ ದೈವಸ್ವರೂಪಿಗಳಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಂ.ಎನ್. ಸರ್ವಿ ಮಾತನಾಡಿ, ಶಾಲೆಯು ಶತಮಾನದ ಹೊಸ್ತಿಲಲ್ಲಿದ್ದು, ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ನೆನೆದು ಗುರುವಂದನಾ ಸಮಾರಂಭ ಆಯೋಜಿಸಿರುವುದು ಶ್ಲಾಘನೀಯ ಎಂದರು. ಶಾಲೆಯ ಇತಿಹಾಸವನ್ನು ವಿವರಿಸಿದ ಅವರು, 1934ರಲ್ಲಿ ಗುರುಮಠದಲ್ಲಿ ಶಾಲೆ ಆರಂಭವಾಗಿ, ಬಳಿಕ ಶಾಶ್ವತ ಕಟ್ಟಡ ನಿರ್ಮಾಣಗೊಂಡ ಹಿನ್ನೆಲೆಯನ್ನು ವಿವರಿಸಿದರು.
ಹಳೆಯ ವಿದ್ಯಾರ್ಥಿ ಶರಣಯ್ಯ ಹಿರೇಮಠ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ಎದುರಾಗಿದ್ದು, ಕೇವಲ ಒಬ್ಬ ಖಾಯಂ ಶಿಕ್ಷಕರಿಂದಲೇ ಕಾರ್ಯನಿರ್ವಹಿಸಲಾಗುತ್ತಿದೆ. ಉಳಿದ ತರಗತಿಗಳಿಗೆ ಅತಿಥಿ ಶಿಕ್ಷಕರು ಪಾಠ ಮಾಡುತ್ತಿರುವುದರಿಂದ ಶೈಕ್ಷಣಿಕ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಶತಮಾನದ ಹೊಸ್ತಿಲಲ್ಲಿರುವ ಶಾಲೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾದೇವಪ್ಪ ಸರ್ವಿ, ಪಿ.ವಿ. ಸರ್ವಿ, ಬಿ.ಎ. ಬನ್ನಿಗೋಳ, ಮುಖ್ಯ ಶಿಕ್ಷಕ ಎಲ್.ಎಸ್. ದೊಡ್ಡಮನಿ, ಎಸ್ಡಿಎಂಸಿ ಅಧ್ಯಕ್ಷ ಎಂ.ಎಸ್. ಜೀರಗಿ, ಜೆ.ಎಚ್. ಮುಲ್ಲಾ, ವಿ. ಮನೋಹರ, ಸುರೇಖಾ ಕಬಲಶೆಟ್ಟಿ, ಡಿ.ಎಸ್. ಗಂಗನಗೌಡ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



