ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಭಾಗದಲ್ಲಿ ಮುಂಗಾರು ಕೈಕೊಟ್ಟ ಪರಿಣಾಮ ಕೃಷಿ ಕ್ಷೇತ್ರ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದ್ದು, ಸಾಲ–ಸೂಲ ಮಾಡಿ ಬೆಳೆದ ಬೆಳೆ ಒಣಗಿ ಹಾಳಾಗಿರುವುದನ್ನು ನೋಡಲಾಗದೆ, ಕನಿಷ್ಠ ಕುರಿಗಳಿಗೆ ಮೇವಾಗಲಿ ಎಂಬ ಆಶಯದಿಂದ ರೈತರು ತಮ್ಮ ಹೊಲಗಳನ್ನೇ ಕುರಿ ಮೇಯಿಸಲು ಬಿಡುತ್ತಿರುವ ಮನಕಲಕುವ ದೃಶ್ಯಗಳು ಕಂಡು ಬರುತ್ತಿವೆ.
ಈ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಶೇಂಗಾ, ಹೆಸರು, ಗೋವಿನ ಜೋಳ, ಮೆಣಸಿನಕಾಯಿ, ಈರುಳ್ಳಿ, ಉದ್ದು ಸೇರಿದಂತೆ ಹಲವು ಬೆಳೆಗಳು ತೇವಾಂಶದ ಕೊರತೆಯಿಂದ ಒಣಗಿ ನಲುಗಿವೆ. ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಇಳುವರಿ ನೀಡುವ ನಿರೀಕ್ಷೆಯನ್ನೇ ಕೈಬಿಟ್ಟಿರುವ ರೈತರು, ಬೆಳೆಯನ್ನು ಜಾನುವಾರುಗಳಿಗೆ ಮೇವಾಗಲು ಬಿಟ್ಟಿದ್ದಾರೆ.
ಬೆಳೆ ಉಳಿಸಿಕೊಳ್ಳಲು ಕೆಲ ರೈತರು ಬೋರ್ವೆಲ್ ನೀರು ಬಳಸಿ ಕೃತಕ ನೀರಾವರಿ ಮಾಡಿದರೂ ಪ್ರಯೋಜನವಾಗಿಲ್ಲ. ಅಂತರ್ಜಲ ಮಟ್ಟ ಕುಸಿಯುತ್ತಿರುವ ಕಾರಣ ನೀರು ಪೂರೈಸುವುದಕ್ಕೂ ರೈತರು ಹಿಂದೇಟು ಹಾಕುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಎರಡರ ಕೊರತೆಯೂ ಎದುರಾಗುವ ಆತಂಕ ವ್ಯಕ್ತವಾಗಿದೆ.
ಕೆಲವೆಡೆ ರೈತರು ಬೆಳೆಗಳನ್ನು ಟ್ರ್ಯಾಕ್ಟರ್ ಮೂಲಕ ಹರಗಿ ನಾಶಪಡಿಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಬೆಳೆ ಹಾನಿ ಪರಿಶೀಲನೆ ಹೆಸರಲ್ಲಿ ಕಾಟಾಚಾರದ ಭೇಟಿ ಮಾತ್ರ ನಡೆಯುತ್ತಿದ್ದು, ರೈತರು ಆರ್ಥಿಕವಾಗಿ ಸಂಪೂರ್ಣ ಕುಸಿದುಬಿದ್ದಿದ್ದಾರೆ.
ರೈತರಾದ ಅಜಯ್ ಗುಡ್ಡದ, ರಮೇಶ್ ನಾಗರಾಳ ಹಾಗೂ ಗಣೇಶ ಹೆಸರೆಡ್ಡಿ ಅವರು, ಸರ್ಕಾರ ಕೂಡಲೇ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರ, ಬೆಳೆ ವಿಮೆ ಹಾಗೂ ಜಾನುವಾರುಗಳಿಗೆ ಮೇವು ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
“ಮೂರು ಎಕರೆ ಗೋವಿನ ಜೋಳ ಬೆಳೆ ಮಳೆ ಇಲ್ಲದೆ ಸಂಪೂರ್ಣ ಒಣಗಿದೆ. ಇಳುವರಿ ಸಿಗುವ ನಿರೀಕ್ಷೆ ಇಲ್ಲದ ಕಾರಣ ಕುರಿಗಳಿಗೆ ಮೇಯಲು ಬಿಟ್ಟಿದ್ದೇನೆ. ಜಿಲ್ಲೆಯ ರೈತರೆಲ್ಲರೂ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಗದಗ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ವಿಮೆ ಹಾಗೂ ಬರ ಪರಿಹಾರ ಬಿಡುಗಡೆ ಮಾಡಬೇಕು.”
ಭೀಮನಗೌಡ ಪಾಟೀಲ, ರೈತ, ಶಿರುಂಜ ಗ್ರಾಮ



