ಜವಳಗಲ್ಲಿ ತೆರವುಗೊಳಿಸಲು ಮುಂದಾದರೆ ಅನಿಲ‌ ಮೆಣಸಿನಕಾಯಿ ಗದಗನಲ್ಲಿ ಎಚ್ಚರಿಕೆಯಿಂದ ಬಾಳಬೇಕಾಗುತ್ತದೆ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಗದಗ:

‘ಅನಿಲ್ ಮೆಣಸಿನಕಾಯಿ ಸಾಹೇಬ್ರೇ ನೀವು ನ್ಯಾಯ ಕೊಡಿಸುವ ಹಾಗಿದ್ದರೆ ಜನತಾ ಬಜಾರ್‌ನಲ್ಲಿ ಬನ್ಸಾಲಿಯವು ಮೂರು ಅಂಗಡಿ ಇವೆ. ನಗರಸಭೆ ಆಸ್ತಿ ಬಹಳಷ್ಟಿದೆ. ಟಾಂಗಾಕೂಟದಿಂದ ಕರಿದೇವರ ಗುಡಿಯವರೆಗೆ ಒಬ್ಬರು ಬಂದರೆ ಇನ್ನೊಬ್ಬರು ಹೋಗಲಾಗುವುದಿಲ್ಲ. ಇಂತಹವುಗಳನ್ನು ತೆರವುಗೊಳಿಸಿ ನಿಮ್ಮ ಹೆಸರು ಗಳಿಸಿಕೊಳ್ಳಿ. ಸ್ಲಂ ಏರಿಯಾದಲ್ಲಿ ಬಂದು ಹೆಸರು ಗಳಿಸಿದರೆ ಉಪಯೋಗವಿಲ್ಲ ಎಂದು ವಾಲ್ಮೀಕಿ ಸಮಾಜದ ಮುಖಂಡ ಬಸವರಾಜ ಬೆಳದಡಿ ಅವರು ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವರ ಹೇಳಿಕೆ ಖಂಡಿಸಿ ಗದಗನ ಜವಳಗಲ್ಲಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ಅವರು ‘ವಕಾರ ಸಾಲು ಮಾಡಿದ ಹಾಗೆ ಇಲ್ಲಿ ಮಾಡಲು ಬಂದರೆ, ಕೇಳುವುದಿಲ್ಲ. ಹಾಗೇನಾದರೂ ಮಾಡಲು ಬಂದರೆ ಚುನಾವಣೆ ವೇಳೆ ನಿಮ್ಮನ್ನು ಒಳಗೆ ಬಿಡುವುದಿಲ್ಲ, ಇದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

‘ಜವಳಗಲ್ಲಿಯಲ್ಲಿರುವ ಹಿಂದೂ ಮುಸ್ಲಿಂರು ಬೇರೆ ಅಲ್ಲ, ಎಲ್ಲರೂ ಒಂದೇ ಎಂಬ ಭಾವದಿಂದ ಬದುಕುತ್ತಿದ್ದೇವೆ. ಓಟಿನ ಆಸೆಗೆ ಹಿಂದೂ ಮುಸ್ಲಿಂರ ಮಧ್ಯೆ ಜಗಳ ಹಚ್ಚಲು ಹೊರಟಿರುವ ಅನಿಲ್ ಮೆಣಸಿನಕಾಯಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಷ್ಟಕ್ಕೆ ಅನಿಲ್ ಮೆಣಸಿನಕಾಯಿ ಸುಮ್ಮನೆ ಕುಳಿತರೆ ಚೊಲೋ ಆಯಿತು. ಇಲ್ಲದಿದ್ದರೆ ಗದಗನಲ್ಲಿ ಎಚ್ಚರಿಕೆಯಿಂದ ಬಾಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿರುವ ಬಸವರಾಜ ಬೆಳದಡಿ, ಜವಳಗಲ್ಲಿಯಲ್ಲಿ ದುಡಿದು ತಿನ್ನುವವರಿದ್ದು, ಜೀವ ಹೋದರೂ ಜಾಗ ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ.

ಏಪ್ರಿಲ್ 2ರಂದು ಸುದ್ದಿಗೋಷ್ಠಿ ನಡೆಸಿದ್ದ ಅನಿಲ್ ಮೆಣಸಿನಕಾಯಿ, ಜವಳಗಲ್ಲಿಯ ರಾಜ ಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿರುವ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿಗಳನ್ನು ತೆರವುಗೊಳಿಸಬೇಕು. ಏಕೆಂದರೆ, ಜೈನ ಮಂದಿರಕ್ಕೆ ಬರುವ ಭಕ್ತರಿಗೆ ಇದರಿಂದ ತೊಂದರೆಯಾಗಲಿದೆ. ಅಲ್ಲದೆ, ಜವಳಿಗಲ್ಲಿಯ 16 ಎಕರೆ ಜಾಗ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ್ದು, ಅನಧಿಕೃತವಾಗಿ ವಾಸವಾಗಿರುವವರನ್ನು ಖಾಲಿ ಮಾಡಿಸಬೇಕು ಎಂದು ಒತ್ತಾಯಿಸಿದ್ದರು. ಅನಿಲ್ ಮೆಣಸಿನಕಾಯಿ ಅವರ ಈ ಹೇಳಿಕೆಯಿಂದ ಆಕ್ರೋಶಗೊಂಡ ಜವಳಗಲ್ಲಿಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಯುಸೂಫ್ ನಮಾಜಿ, ನಗರಸಭೆ ಸದಸ್ಯ ಜೂನ್‌ಸಾಬ ನಮಾಜಿ, ಕಾಂಗ್ರೆಸ್ ಮುಖಂಡ ಮುನ್ನಾ ರೇಶ್ಮಿ ಸೇರಿದಂತೆ ಸ್ಥಳೀಯರು ಇದ್ದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ