ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ವಸತಿ ಗೃಹಗಳಿಗೆ ಆಗಂತುಕರು ನುಗ್ಗಿರುವ ಘಟನೆ ಆತಂಕ ಮೂಡಿಸಿದೆ.
ಆಗಸ್ಟ್ 1ರ ಮಧ್ಯರಾತ್ರಿ ಸುಮಾರು ಮೂರ್ನಾಲ್ಕು ಮಂದಿ ಅಪರಿಚಿತರು ವಿಶ್ವವಿದ್ಯಾಲಯದ ಮೂರು ವಸತಿ ಗೃಹಗಳ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಆಗಂತುಕರು ಕೈಯಲ್ಲಿ ಚಾಕು ಹಿಡಿದು ವಸತಿ ಗೃಹದೊಳಗೆ ಓಡಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಆಗಂತುಕರು ವಿಶ್ವವಿದ್ಯಾಲಯದ ಪ್ರೊಫೆಸರ್ಗಳಾದ ಮಹಿಮಾರಾಜ್, ಡಾ. ಸಂಗಮೇಶ್ ಹಾಗೂ ಡಾ. ಎಂ. ಶಿವಮೂರ್ತಿ ಅವರಿಗೆ ಹಂಚಿಕೆಯಾಗಿದ್ದ ವಸತಿ ಗೃಹಗಳಿಗೆ ನುಗ್ಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ನಡೆದ ವೇಳೆ ವಸತಿ ಗೃಹಗಳಲ್ಲಿ ಯಾರೂ ಇರದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಮಧ್ಯರಾತ್ರಿ ಅಪರಿಚಿತರು ಚಾಕು ಹಿಡಿದು ಪ್ರವೇಶಿಸಿರುವುದು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಘಟನೆ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.



