ಮೈಸೂರು: ಆಷಾಢ ಮಾಸದ ಕಡೆಯ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಗಿದೆ.
ಇಂದು ತಾಯಿ ಚಾಮುಂಡೇಶ್ವರಿ ಲಕ್ಷ್ಮಿ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.
ಕಡೆಯ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಬ್ರಾಹ್ಮಿ ಮುಹೂರ್ತದಿಂದಲೇ ಭಕ್ತರು ರಸ್ತೆ ಮಾರ್ಗ ಹಾಗೂ ಮೆಟ್ಟಿಲುಗಳ ಮೂಲಕ ಬೆಟ್ಟ ಏರಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.
ದೇವಾಲಯದ ಒಳಾಂಗಣವನ್ನು ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಕರ್ಪೂರ, ಗಂಧ ಹಾಗೂ ಧೂಪದ ಪರಿಮಳದ ನಡುವೆ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದಾರೆ.
ಆಷಾಢ ಮಾಸದ ಮೊದಲ ಶುಕ್ರವಾರದಂದು ತಾಯಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಎರಡನೇ ಹಾಗೂ ಮೂರನೇ ಶುಕ್ರವಾರದಂದು ಲಕ್ಷ್ಮಿ ಅಲಂಕಾರ ನೆರವೇರಿಸಲಾಗಿತ್ತು. ಇದೀಗ ಕಡೆಯ ಶುಕ್ರವಾರವೂ ಲಕ್ಷ್ಮಿ ದೇವಿಯ ಅಲಂಕಾರದಲ್ಲಿ ಚಾಮುಂಡೇಶ್ವರಿ ಕಂಗೊಳಿಸುತ್ತಿದ್ದಾಳೆ.
ಭಕ್ತರ ಅನುಕೂಲಕ್ಕಾಗಿ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ₹2 ಸಾವಿರ ಮೌಲ್ಯದ ಟಿಕೆಟ್ ಪಡೆದವರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಮಂಗಳಾರತಿ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ವಿವಿಐಪಿ ದರ್ಶನ ವ್ಯವಸ್ಥೆ ಮಾಡಲಾಗಿದೆ.



