ನೆಲಮಂಗಲ: ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ತನಿಖೆಗೆ ಮಹತ್ವದ ಸುಳಿವು ಸಿಕ್ಕಿದೆ. ಅವರ ಲ್ಯಾಪ್ಟಾಪ್ನಲ್ಲಿ ಪತ್ತೆಯಾದ ಮಾಹಿತಿ ಹಾಗೂ ನಾಪತ್ತೆಯಾಗುವ ಮುನ್ನದ ಚಲನವಲನಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಪ್ರಕರಣದ ಪ್ರತಿಯೊಂದು ಆಯಾಮವನ್ನು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದ ಮಧ್ಯಪ್ರದೇಶದ ಇಂದೋರ್ ಮೂಲದ ಅದ್ವೈತ್ ಉಪಾಧ್ಯಾಯ, ಆಗಸ್ಟ್ 7ರಂದು ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಮೂರನೇ ದಿನವೂ ಅವರಿಗಾಗಿ ಪೊಲೀಸ್, ಎಸ್ಡಿಆರ್ಎಫ್ ಹಾಗೂ ನುರಿತ ಚಾರಣಿಗರ ತಂಡ ಬೃಹತ್ ಕಾರ್ಯಾಚರಣೆ ನಡೆಸುತ್ತಿದೆ.
ತನಿಖೆಯ ಭಾಗವಾಗಿ ಅದ್ವೈತ್ ಅವರ ನಿವಾಸವನ್ನು ಪೊಲೀಸರು ಪರಿಶೀಲಿಸಿದ್ದು, ಈ ವೇಳೆ ಅವರ ಲ್ಯಾಪ್ಟಾಪ್ ವಶಕ್ಕೆ ಸಿಕ್ಕಿದೆ. ಲ್ಯಾಪ್ಟಾಪ್ನಲ್ಲಿದ್ದ ಕೆಲವು ಆನ್ಲೈನ್ ಹುಡುಕಾಟಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಶಿವಗಂಗೆ ಬೆಟ್ಟದ ಶಾಂತಲಾ ಡ್ರಾಪ್ ಪ್ರದೇಶಕ್ಕೆ ಸಂಬಂಧಿಸಿದ ಆತಂಕಕಾರಿ ಮಾಹಿತಿಯನ್ನು ಅವರು ಹುಡುಕಿದ್ದರೆಂಬ ಶಂಕೆ ವ್ಯಕ್ತವಾಗಿದೆ.
ಈ ನಡುವೆ ನಾಪತ್ತೆಯಾಗುವ ಕೆಲ ದಿನಗಳ ಮುನ್ನವೇ ಅದ್ವೈತ್ ಶಿವಗಂಗೆಗೆ ಭೇಟಿ ನೀಡಿ ಶಾಂತಲಾ ಡ್ರಾಪ್ ಪ್ರದೇಶದ ಸುತ್ತಮುತ್ತ ಓಡಾಡಿದ್ದರು ಎಂಬ ಮಾಹಿತಿಯೂ ಪೊಲೀಸ್ ತನಿಖೆಯಲ್ಲಿ ಹೊರಬಂದಿದೆ ಎನ್ನಲಾಗಿದೆ. ಹೀಗಾಗಿ ಅವರ ನಾಪತ್ತೆ ಪೂರ್ವನಿಯೋಜಿತವಾಗಿತ್ತೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಟ್ರೆಕ್ಕಿಂಗ್ಗೆ ತೆರಳಿದ ದಿನ ಬೆಟ್ಟ ಹತ್ತುವ ವೇಳೆ ಅದ್ವೈತ್ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಾಪ್ತಿ ಚೌಹಾಣ್ ಅವರಿಗೆ ಫೋಟೋವೊಂದನ್ನು ಕಳುಹಿಸಿದ್ದರು. ಅದಾದ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೇ ನಾಪತ್ತೆಯಾಗಿದ್ದಾರೆ.
ಇದರ ನಡುವೆ ಬೆಟ್ಟದ ತುತ್ತತುದಿಯಲ್ಲಿ ಇತರ ಚಾರಣಿಗರು ತೆಗೆದಿದ್ದ ಫೋಟೋಗಳಲ್ಲಿ ಅದ್ವೈತ್ ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಇದೇ ಸುಳಿವಿನ ಆಧಾರದಲ್ಲಿ ಪೊಲೀಸರು ಶಾಂತಲಾ ಡ್ರಾಪ್ ಹಾಗೂ ಸುತ್ತಮುತ್ತಲಿನ ದುರ್ಗಮ ಪ್ರದೇಶಗಳತ್ತ ಶೋಧ ಕಾರ್ಯವನ್ನು ಕೇಂದ್ರೀಕರಿಸಿದ್ದಾರೆ.
ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ, ಎಸ್ಡಿಆರ್ಎಫ್ ತಂಡ ಮತ್ತು ಅನುಭವಿ ಚಾರಣಿಗರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರೋನ್ ಕ್ಯಾಮೆರಾಗಳ ಮೂಲಕ ಆಳವಾದ ಕಂದಕ, ಕಡಿದಾದ ಬಂಡೆಗಳು ಮತ್ತು ಸಾಮಾನ್ಯವಾಗಿ ತಲುಪಲು ಕಷ್ಟವಾಗುವ ಪ್ರದೇಶಗಳನ್ನು ಪರಿಶೀಲಿಸಲಾಗುತ್ತಿದೆ.
ಶಾಂತಲಾ ಡ್ರಾಪ್ ಶಿವಗಂಗೆ ಬೆಟ್ಟದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾಗಿದೆ. ಆಳವಾದ ಕಂದಕ, ಕಡಿದಾದ ಬಂಡೆಗಳು ಮತ್ತು ದುರ್ಗಮ ಭೌಗೋಳಿಕ ಪರಿಸ್ಥಿತಿ ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಆದರೂ ತಂಡಗಳು ಸಾಧ್ಯವಿರುವ ಎಲ್ಲ ಪ್ರದೇಶಗಳನ್ನು ಜಾಲಾಡುತ್ತಿವೆ.
ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟದ ತುತ್ತತುದಿಯ ಈ ಪ್ರದೇಶಕ್ಕೆ ‘ಶಾಂತಲಾ ಡ್ರಾಪ್’ ಎಂಬ ಹೆಸರು ಬಂದಿದೆ. ಹೊಯ್ಸಳ ರಾಜ ವಿಷ್ಣುವರ್ಧನನ ಪತ್ನಿ ಹಾಗೂ ನಾಟ್ಯರಾಣಿ ಶಾಂತಲೆ ಈ ಪ್ರದೇಶದಲ್ಲಿ ಮರಣ ಹೊಂದಿದ್ದಾಳೆ ಎಂಬ ಸ್ಥಳೀಯ ಜನಪದ ನಂಬಿಕೆಯಿದೆ.
ಮರಗಿಡಗಳು ಮತ್ತು ಬೃಹತ್ ಕಲ್ಲುಬಂಡೆಗಳಿಂದ ಆವೃತವಾಗಿರುವ ಈ ಪ್ರದೇಶದ ಅಪಾಯದ ಬಗ್ಗೆ ಹಲವು ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಸದ್ಯ ಅದ್ವೈತ್ ಉಪಾಧ್ಯಾಯರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಅವರ ನಾಪತ್ತೆಯ ಹಿಂದಿನ ನಿಖರ ಕಾರಣವನ್ನು ತನಿಖೆ ಮೂಲಕವೇ ಪತ್ತೆಹಚ್ಚಬೇಕಿದೆ.



