
ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕೆಚ್ಚೆದೆಯ ಕನ್ನಡಿಗರು ಎನ್ನುವ ಸಂಘಟನೆ ಮೂಲಕ ರಾಜ್ಯಾದ್ಯಂತ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಅನು ಅಕ್ಕನ ಬಳಗಕ್ಕೆ ಇಲ್ಲಿನ ನಗರಸಭೆ ಅಸಹಕಾರ ತೋರಿದ್ದು, ಬಳಗವು ವಿನೂತನವಾಗಿ ಪ್ರತಿಭಟಿಸಿದ ಘಟನೆ ಮಂಗಳವಾರ ನಗರಸಭೆ ಎದುರು ನಡೆದಿದೆ.
ನಗರದ ಗವಿಮಠದ ಹಿಂದಿರುವ ಸ್ಮಶಾನವನ್ನು ಸ್ವಚ್ಛಗೊಳಿಸುವ ಮೂಲಕ ಜನತೆಯ ಮೆಚ್ಚುಗೆ ಗಳಿಸಿರುವ ಅನು ಅಕ್ಕ ಮತ್ತು ಬಳಗದವರು ಕಸವನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಕಳಿಸಿಕೊಡುವಂತೆ ನಗರಸಭೆಗೆ ಕಳೆದ ಮೂರ್ನಾಲ್ಕು ದಿನಗಳಿಂದಲೂ ಮನವಿ ಮಾಡುತ್ತಲೇ ಇದ್ದಾರೆ. ದಪ್ಪ ಚರ್ಮದ ಕೊಪ್ಪಳ ನಗರಸಭೆಯ ಅಧಿಕಾರಿಗಳು ಮೊದಲೆಲ್ಲ ಕ್ಯಾರೆ ಎಂದಿಲ್ಲ. ಮಂಗಳವಾರ ಟ್ರ್ಯಾಕ್ಟರ್ ಕಳಿಸಿಕೊಡಲು ಆಗಲ್ಲ ಎಂದು ನಿಷ್ಕಾಳಜಿ ತೋರಿದ್ದಾರೆ.
ಕೂಡಲೇ ಅನು ಅಕ್ಕನ ನಳಗದ ಸದಸ್ಯರು ಬಾಡಿಗೆ ಟ್ರ್ಯಾಕ್ಟರ್‌ನಲ್ಲಿ ಸ್ಮಶಾನದ ಕಸ ತುಂಬಿ ನಗರಸಭೆ ಎದುರು ವಿಲೇವಾರಿ ಮಾಡಲು ಸಿದ್ಧಗೊಂಡಿದ್ದಾರೆ. ಇಲ್ಲಾದರೂ ನಗರಸಭೆಯವರು ಟ್ರ್ಯಾಕ್ಟರ್ ತೋರಿಸಿದರೆ ಕಸವನ್ನು ನಗರಸಭೆಯ ವಾಹನಕ್ಕೆ ತುಂಬುವುದಾಗಿ ಅನು ವಿಜಯಸಾಕ್ಷಿಗೆ ತಿಳಿಸಿದರು.