ನವದೆಹಲಿ/ಬೆಂಗಳೂರು: ಟ್ರಾಫಿಕ್ ಜಾಮ್‌ಗೆ ಕುಖ್ಯಾತಿ ಪಡೆದಿರುವ ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎಂಬ ಪಟ್ಟಕ್ಕೆ ಸೇರಿದೆ. ಟಾಮ್‌ಟಾಮ್ ಸಂಸ್ಥೆಯ 2025ರ ಟ್ರಾಫಿಕ್ ಇಂಡೆಕ್ಸ್ ವರದಿಯಲ್ಲಿ ಬೆಂಗಳೂರು ಭಾರತದಲ್ಲಿ ಮೊದಲ ಸ್ಥಾನ ಪಡೆದಿದ್ದು, ಕೇವಲ 10 ಕಿಲೋಮೀಟರ್ ಸಂಚಾರಕ್ಕೆ ಸರಾಸರಿ 36 ನಿಮಿಷ 9 ಸೆಕೆಂಡ್ ಬೇಕಾಗುತ್ತಿರುವುದು ಆತಂಕಕಾರಿ ಅಂಶವಾಗಿದೆ.
ವಿಶ್ವದ ಪ್ರಮುಖ ನಗರಗಳ ಸಂಚಾರ ಪರಿಸ್ಥಿತಿಯನ್ನು ಅಧ್ಯಯನ ನಡೆಸುವ ನ್ಯಾವಿಗೇಷನ್ ಟೆಕ್ನಾಲಜಿ ಕಂಪನಿ ಟಾಮ್‌ಟಾಮ್ ತನ್ನ ವಾರ್ಷಿಕ ಟ್ರಾಫಿಕ್ ಇಂಡೆಕ್ಸ್‌ನಲ್ಲಿ ಬೆಂಗಳೂರಿನ ವಾಹನ ದಟ್ಟಣೆಯ ಚಿತ್ರಣವನ್ನು ಬಹಿರಂಗಪಡಿಸಿದೆ. ಈಗಾಗಲೇ ಸಂಚಾರ ದಟ್ಟಣೆಯಿಂದ ವಿಶ್ವಮಟ್ಟದಲ್ಲೂ ಕುಖ್ಯಾತಿ ಪಡೆದಿದ್ದ ಬೆಂಗಳೂರು, 2025ರ ವರದಿಯಲ್ಲಿ ಭಾರತದಲ್ಲೇ ಮೊದಲ ಸ್ಥಾನ ಪಡೆದು ಮತ್ತೆ ಸುದ್ದಿಯಾಗಿದೆ.
ನಗರದಲ್ಲಿ ವಾಹನ ಸವಾರರು ಪೀಕ್ ಅವರ್ ಟ್ರಾಫಿಕ್‌ನಲ್ಲಿ ವರ್ಷಕ್ಕೆ ಬರೋಬ್ಬರಿ 168 ಗಂಟೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಂದರೆ ಸುಮಾರು 7 ದಿನಗಳ ಕಾಲ ರಸ್ತೆ ಮೇಲೆಯೇ ಸಮಯ ವ್ಯರ್ಥವಾಗುತ್ತಿದೆ ಎಂಬ ಅಂಶ ವರದಿಯಲ್ಲಿ ಬಹಿರಂಗವಾಗಿದೆ.
ರಶ್ ಅವರ್ ವೇಳೆ ಬೆಂಗಳೂರಿನ ವಾಹನಗಳ ಸರಾಸರಿ ವೇಗ ಗಂಟೆಗೆ ಕೇವಲ 13.9 ಕಿಲೋಮೀಟರ್‌ಗೆ ಇಳಿಯುತ್ತಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಆತಂಕವೂ ವ್ಯಕ್ತವಾಗಿದೆ.
ಬೆಂಗಳೂರು ಬಳಿಕ ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದ್ದರೆ, ಪುಣೆ ಮೂರನೇ ಸ್ಥಾನ ಪಡೆದಿದೆ. ಪುಣೆಯಲ್ಲಿ 10 ಕಿಲೋಮೀಟರ್ ದೂರ ಕ್ರಮಿಸಲು ಸರಾಸರಿ 33 ನಿಮಿಷ 20 ಸೆಕೆಂಡ್ ಬೇಕಾಗುತ್ತಿದೆ.
ನಗರದ ವೇಗವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ರಸ್ತೆ ಮೂಲಸೌಕರ್ಯಗಳ ಮೇಲಿನ ಒತ್ತಡ ಮತ್ತು ಪೀಕ್ ಅವರ್ ದಟ್ಟಣೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ದಿನದಿಂದ ದಿನಕ್ಕೆ ಗಂಭೀರಗೊಳಿಸುತ್ತಿದೆ. 2025ರ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಇದೀಗ ಬೆಂಗಳೂರಿನ ಸಂಚಾರ ವ್ಯವಸ್ಥೆಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ.



