ಗದಗ: ‘ಮಂಗಳ ಗೌರಿ ಮದುವೆ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಹಿರಿಯ ಕಲಾವಿದ ವಿಜಯಕುಮಾರ್ ಜಿತೂರಿ ನಿಧನರಾಗಿದ್ದಾರೆ. ಸೋಮವಾರ ಸಂಜೆ ಗದಗದ ಬೆಟಗೇರಿಯಲ್ಲಿ ಅವರು ಕೊನೆಯುಸಿರೆಳೆದಿದ್ದು, ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ವಿಜಯಕುಮಾರ್ ಜಿತೂರಿ ಅವರದ್ದು ಬಹುಮುಖ ಪ್ರತಿಭೆ. ನಟನೆಯೊಂದಿಗೆ ಗಾಯನದಲ್ಲೂ ಆಸಕ್ತಿ ಹೊಂದಿದ್ದ ಅವರು ಕಿರುತೆರೆ ಮಾತ್ರವಲ್ಲದೆ ಹಿರಿತೆರೆ ಹಾಗೂ ರಂಗಭೂಮಿಯಲ್ಲೂ ಅಭಿನಯಿಸಿದ್ದರು. ಹಲವು ವರ್ಷಗಳ ಕಾಲ ಬಣ್ಣದ ಲೋಕದೊಂದಿಗೆ ನಂಟು ಹೊಂದಿದ್ದ ಅವರು, ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.
ಗಗನ್ ಚಿನ್ನಪ್ಪ ಅಭಿನಯದ ‘ಮಂಗಳ ಗೌರಿ ಮದುವೆ’ ಧಾರಾವಾಹಿಯಲ್ಲಿ ಕಾನ್‌ಸ್ಟೇಬಲ್ ಪಾತ್ರದಲ್ಲಿ ವಿಜಯಕುಮಾರ್ ಜಿತೂರಿ ಕಾಣಿಸಿಕೊಂಡಿದ್ದರು. ಧಾರಾವಾಹಿಯ ಹಲವು ಪ್ರಮುಖ ಸನ್ನಿವೇಶಗಳಲ್ಲಿ ಗಗನ್ ಚಿನ್ನಪ್ಪ ಅವರೊಂದಿಗೆ ಅಭಿನಯಿಸಿ ಗುರುತಿಸಿಕೊಂಡಿದ್ದರು.
ಕಲಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದರೂ ಇತ್ತೀಚಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ನಟನಾ ಅವಕಾಶಗಳು ದೊರೆಯಲಿಲ್ಲ ಎನ್ನಲಾಗಿದೆ. ಇದರ ಪರಿಣಾಮವಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಬೆಂಗಳೂರಿನಲ್ಲಿ ಮನೆ ಬಾಡಿಗೆ ಸೇರಿದಂತೆ ಜೀವನ ನಿರ್ವಹಣೆಯ ಸವಾಲುಗಳಿಂದಾಗಿ ಅವರು ಹುಟ್ಟೂರಾದ ಗದಗಕ್ಕೆ ವಾಪಸ್ ಆಗಿದ್ದರು.
ಇದೀಗ ವಿಜಯಕುಮಾರ್ ಜಿತೂರಿ ಅವರ ನಿಧನದಿಂದ ಅವರ ಕುಟುಂಬ, ಆಪ್ತರು ಹಾಗೂ ಕಲಾ ಕ್ಷೇತ್ರದ ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ. ನಟ, ಗಾಯಕ ಹಾಗೂ ರಂಗಭೂಮಿ ಕಲಾವಿದನಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಹಲವರು ಸಂತಾಪ ಸೂಚಿಸಿದ್ದಾರೆ.



