ವಿಜಯಸಾಕ್ಷಿ ಸುದ್ದಿ, ಗದಗ:
ಮೂತ್ರಕೋಶದಲ್ಲಿ ಬರೋಬ್ಬರಿ 1 ಕೆಜಿ 100 ಗ್ರಾಂ ತೂಕದ ಮೂತ್ರ ಕೋಶದ ಕಲ್ಲನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಖಾಸಗಿ ಆಸ್ಪತ್ರೆಯ ವೈದ್ಯರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂತ್ರಕೋಶದಿಂದ ರಕ್ತಸ್ರಾವದ ತೊಂದರೆಯಿಂದ ಬಳಲುತ್ತಿದ್ದ 33 ವರ್ಷದ ವ್ಯಕ್ತಿಯೋರ್ವನು ನಗರದ ಆಶ್ರಯ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ. ಈ ವೇಳೆ ತಜ್ಞ ವೈದ್ಯರ ತಂಡ ರೋಗಿಯನ್ನು ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿತ್ತು. ಬಳಿಕ ಸ್ಕ್ಯಾನಿಂಗ್‌ನಲ್ಲಿ ಭಾರೀ ಗಾತ್ರದ ಕಲ್ಲು ಇರುವದನ್ನು ವೈದ್ಯರ ತಂಡ ಖಚಿತಪಡಿಸಿಕೊಂಡಿದೆ.

ರೋಗಿಯ ರಕ್ತದೊತ್ತಡ ಸಹಜ ಸ್ಥಿತಿಗೆ ಬಂದ ಬಳಿಕ ಶಸ್ತ್ರ ಚಿಕಿತ್ಸೆ ಕೈಗೊಂಡ ವೈದ್ಯರು 1 ಕೆಜಿ 100 ಗ್ರಾಮ ತೂಕದ ಮೂತ್ರಕೋಶದ ಕಲ್ಲನ್ನು ಹೊರ ತೆಗೆದಿದ್ದಾರೆ.
ಆಶ್ರಯ ಆಸ್ಪತ್ರೆಯ ಡಾ.ಭುವನೇಶ, ಡಾ.ಶ್ರೀಧರ ಕುರಡಗಿ, ಡಾ.ಪಿ.ವಿ.ಮರಗಿ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಶಸ್ತ್ರ ಚಿಕಿತ್ಸೆ ನಡೆಸಿ ಕಲ್ಲನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಸದ್ಯ ರೋಗಿಯು ಆರೋಗ್ಯ ಮತ್ತು ಸುರಕ್ಷಿತವಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಮೂತ್ರ ಕೋಶದಲ್ಲಿ 1ಸೆಂಟಿ ಮೀಟರ್, 2ಸೆಂಟಿ ಮೀಟರ್‌ದಷ್ಟು ಕಿಡ್ನಿ ಸ್ಟೋನ್ ಇರುತ್ತವೆ. ಆದರೆ, ಈ ರೋಗಿಯಲ್ಲಿ 12 ಸೆಂ.ಮೀ.ನಷ್ಟು ಕಲ್ಲು 1 ಕೆ.ಜಿ 100 ಗ್ರಾಂ ತೂಕದ್ದಾಗಿದೆ. ಭಾರೀ ಗಾತ್ರದ ಕಿಡ್ನಿ ಸ್ಟೋನ್ ಪತ್ತೆಯಾಗಿರುವದು ಈ ಭಾಗದಲ್ಲಿ ಅಪರೂಪ ಎಂದು ಆಶ್ರಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀಧರ ಕುರಡಗಿ ಹೇಳಿದ್ದಾರೆ.
‘ಮೂತ್ರಕೋಶದ ಸಮಸ್ಯೆಗಳಿದ್ದಲ್ಲಿ ಅಲಕ್ಷಿಸುವಂತಿಲ್ಲ. ಕಿಡ್ನಿಯಲ್ಲಿ ಯಾವುದಾದರೂ ತೊಂದರೆ ಕಂಡು ಬಂದಲ್ಲಿ ತಕ್ಷಣ ತಜ್ಞ ವೈದ್ಯರಲ್ಲಿ ಪರೀಕ್ಷೆಗೆ ಒಳಪಡುವದು ಸೂಕ್ತ. ಇದೀಗ ಆಶ್ರಯ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಅವಕಾಶವಿದ್ದು, ಸರ್ಕಾರ ನೀಡಿರುವ ಯೋಜನೆಯ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಾಳಜಿ ಹೊಂದಬೇಕು ಎಂದು ಶ್ರೀಧರ ಕುರಡಗಿ ತಿಳಿಸಿದ್ದಾರೆ.