ಚಿಕ್ಕಬಳ್ಳಾಪುರ: ರಾತ್ರೋರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಸುಮಾರು 3 ಲಕ್ಷ ರೂ. ಮೌಲ್ಯದ ದಾಳಿಂಬೆ ಬೆಳೆಯನ್ನು ಕದ್ದು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಗ್ರಾಮದಲ್ಲಿ ನಡೆದಿದೆ.
ರೈತ ಮಂಜುನಾಥ್ ಅವರ ತೋಟದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ನೀರಿನ ಕೊರತೆಯ ನಡುವೆಯೂ ಹನಿ ಹನಿ ನೀರುಣಿಸಿ ಬೆಳೆ ಉಳಿಸಿಕೊಂಡಿದ್ದ ರೈತನಿಗೆ ಇದೀಗ ದೊಡ್ಡ ಆಘಾತ ಎದುರಾಗಿದೆ.
ತೋಟದಲ್ಲಿದ್ದ 2ರಿಂದ 3 ಟನ್ ದಾಳಿಂಬೆ ಕಳುವಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ ₹130ರಿಂದ ₹150ರವರೆಗೆ ಬೆಲೆ ಇತ್ತು ಎನ್ನಲಾಗಿದೆ. ಉತ್ತಮ ಬೆಲೆ ಸಿಗುತ್ತಿದ್ದ ಹಿನ್ನೆಲೆಯಲ್ಲಿ ಕಳ್ಳರು ದಾಳಿಂಬೆ ಬೆಳೆಯನ್ನು ಗುರಿಯಾಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಂಜುನಾಥ್ ಅವರು ಪತ್ನಿಯ ಚಿನ್ನಾಭರಣಗಳನ್ನು ಅಡವಿಟ್ಟು, ಸಾಲ ಮಾಡಿಕೊಂಡು ಮುಕ್ಕಾಲು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದರು. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ, ಕಷ್ಟಪಟ್ಟು ಬೆಳೆಸಿದ್ದ ಫಸಲು ಕೈಗೆ ಬರುವಷ್ಟರಲ್ಲಿ ಕಳ್ಳರ ಪಾಲಾಗಿದೆ.
ಘಟನೆ ಬಳಿಕ ಸ್ಥಳೀಯ ರೈತರು ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಈ ಕಳ್ಳತನಕ್ಕೆ ಕಡಿವಾಣ ಹಾಕದಿದ್ದರೆ ಮತ್ತಷ್ಟು ರೈತರ ತೋಟಗಳಿಗೂ ಕಳ್ಳರು ಕನ್ನ ಹಾಕುವ ಆತಂಕವಿದೆ ಎಂದು ರೈತರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರು ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



