HomeKarnataka Newsಜೆಪ್ಟೋಗೆ ಬಿಗ್ ಶಾಕ್! ಅಸ್ವಚ್ಛವಾಗಿದ್ದ ಹೊಸಕೋಟೆ ಗೋದಾಮು ಸೀಜ್ ಮಾಡಿದ ಆಹಾರ ಸುರಕ್ಷತಾ ಇಲಾಖೆ

ಜೆಪ್ಟೋಗೆ ಬಿಗ್ ಶಾಕ್! ಅಸ್ವಚ್ಛವಾಗಿದ್ದ ಹೊಸಕೋಟೆ ಗೋದಾಮು ಸೀಜ್ ಮಾಡಿದ ಆಹಾರ ಸುರಕ್ಷತಾ ಇಲಾಖೆ

For Dai;y Updates Join Our whatsapp Group

ಹೊಸಕೋಟೆ: ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿರುವ ಕ್ವಿಕ್‌ ಕಾಮರ್ಸ್‌ ಸಂಸ್ಥೆ ಜೆಪ್ಟೋಗೆ ಸೇರಿದ ಗೋದಾಮಿನ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ಹಲವು ಗಂಭೀರ ಲೋಪಗಳು ಪತ್ತೆಯಾಗಿವೆ.

ಗೋದಾಮಿನಲ್ಲಿ ಸಾವಯವ ತ್ಯಾಜ್ಯ, ಎಲ್ಲೆಂದರಲ್ಲಿ ಬಿದ್ದಿದ್ದ ಕವರ್‌ಗಳು ಹಾಗೂ ಬಾಟಲಿಗಳು, ನೆಲದ ಮೇಲೆ ಸಂಗ್ರಹವಾಗಿದ್ದ ಕೊಳೆ ಮತ್ತು ಖಾಲಿ ಕಾರ್ಡ್‌ಬೋರ್ಡ್‌ ಬಾಕ್ಸ್‌ಗಳು ಕಂಡುಬಂದಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಜೆಪ್ಟೋ ಗೋದಾಮಿನಲ್ಲಿ ಆಹಾರ ಉತ್ಪನ್ನಗಳ ಗುಣಮಟ್ಟ, ಸುರಕ್ಷತೆ, ಸಂಗ್ರಹಣೆ, ಲೇಬಲಿಂಗ್‌ ಹಾಗೂ ಆಹಾರ ನಿರ್ವಹಣಾ ಕ್ರಮಗಳನ್ನು ಪರಿಶೀಲಿಸಲು ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತಾ ವಿಭಾಗ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿತ್ತು.

ತಪಾಸಣೆ ವೇಳೆ ಗೋದಾಮಿನ ಪರಿಸ್ಥಿತಿ ಅತ್ಯಂತ ಅಸ್ವಚ್ಛವಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಉತ್ಪನ್ನಗಳಿದ್ದ ಪ್ರದೇಶದಲ್ಲಿ ಸಾವಯವ ತ್ಯಾಜ್ಯ, ಕವರ್‌ಗಳು, ಬಾಟಲಿಗಳು ಹಾಗೂ ಖಾಲಿ ಕಾರ್ಡ್‌ಬೋರ್ಡ್‌ ಬಾಕ್ಸ್‌ಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡುಬಂದಿದೆ. ನೆಲದ ಮೇಲೂ ಕೊಳೆ ಸಂಗ್ರಹವಾಗಿದ್ದ ಹಿನ್ನೆಲೆಯಲ್ಲಿ ಆಹಾರ ಉತ್ಪನ್ನಗಳ ಸಂಗ್ರಹಣೆ ಮತ್ತು ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಹಾರ ಉತ್ಪನ್ನಗಳ ಲೇಬಲಿಂಗ್‌ನಲ್ಲಿ FSSAI ನಿಯಮಗಳಿಗೆ ವಿರುದ್ಧವಾದ ಅಂಶಗಳು ಕಂಡುಬಂದಿವೆ. ಇದರ ಜೊತೆಗೆ ತಪ್ಪು ಬ್ರ್ಯಾಂಡಿಂಗ್‌, ಅಸ್ವಚ್ಛ ರೀತಿಯಲ್ಲಿ ಆಹಾರ ನಿರ್ವಹಣೆ ಹಾಗೂ ಸೂಕ್ತವಲ್ಲದ ಸಂಗ್ರಹಣಾ ಪರಿಸ್ಥಿತಿಗಳಂತಹ ಹಲವು ಆಹಾರ ಸುರಕ್ಷತಾ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ಇಲಾಖೆ ತಿಳಿಸಿದೆ.

ತಪಾಸಣೆಯಲ್ಲಿ ಹಲವು ನಿಯಮ ಉಲ್ಲಂಘನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜೆಪ್ಟೋ ಗೋದಾಮನ್ನು ಸೀಲ್ ಮಾಡಿದೆ. ಸಂಸ್ಥೆಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಸಂಬಂಧಪಟ್ಟ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಲಾಗಿದೆ.

ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಆಹಾರ ಉದ್ಯಮ ನಿರ್ವಾಹಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಸಾರ್ವಜನಿಕರಿಗೆ ಸುರಕ್ಷಿತ, ಗುಣಮಟ್ಟದ ಹಾಗೂ ಸ್ವಚ್ಛ ಆಹಾರ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಇಂತಹ ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಜೆಪ್ಟೋ ಕೂಡ ಪ್ರತಿಕ್ರಿಯೆ ನೀಡಿದೆ. ದೇಶಾದ್ಯಂತ ಅಧಿಕಾರಿಗಳು ನಿಯಮಿತ ಮೇಲ್ವಿಚಾರಣೆಯ ಭಾಗವಾಗಿ ಆಹಾರ ಸುರಕ್ಷತಾ ತಪಾಸಣೆಗಳನ್ನು ನಡೆಸುತ್ತಾರೆ. ತಪಾಸಣೆ ವೇಳೆ ಅಧಿಕಾರಿಗಳೊಂದಿಗೆ ಸಂಸ್ಥೆ ಸಂಪೂರ್ಣ ಸಹಕರಿಸಿದೆ ಎಂದು ಜೆಪ್ಟೋ ವಕ್ತಾರರು ತಿಳಿಸಿದ್ದಾರೆ.

ಅಧಿಕಾರಿಗಳು ನೀಡಿದ ಸೂಚನೆಗಳು ಹಾಗೂ ಗಮನಕ್ಕೆ ತಂದಿರುವ ಅಂಶಗಳನ್ನು ದಾಖಲಿಸಿಕೊಂಡಿದ್ದು, ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜೆಪ್ಟೋ ತಿಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img