HomeGadag News‘ನೀವು ತೋರಿದ ಪ್ರೀತಿ, ರೊಟ್ಟಿಬುತ್ತಿ ಮರೆಯಲ್ಲ; ಕಳಸಾ-ಬಂಡೂರಿ ಹೋರಾಟ ಸ್ಮರಿಸಿ ಭಾವುಕರಾದ ಸಿಎಂ ಬೊಮ್ಮಾಯಿ

‘ನೀವು ತೋರಿದ ಪ್ರೀತಿ, ರೊಟ್ಟಿಬುತ್ತಿ ಮರೆಯಲ್ಲ; ಕಳಸಾ-ಬಂಡೂರಿ ಹೋರಾಟ ಸ್ಮರಿಸಿ ಭಾವುಕರಾದ ಸಿಎಂ ಬೊಮ್ಮಾಯಿ

Spread the love

ನರಗುಂದ ವಿಧಾನಸಭಾ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಲೋಕಾರ್ಪಣೆ

ವಿಜಯಸಾಕ್ಷಿ ಸುದ್ದಿ, ನರಗುಂದ:

‘ನಿಮ್ಮೂರಿಗೆ ಬಂದಾಗ ನೀವು ತೋರಿಸಿರುವ ಪ್ರೀತಿ, ಕೊಟ್ಟಂತಹ ರೊಟ್ಟಿ ಬುತ್ತಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾತ್ರಿಯಾದಾಗ ನಿಮ್ಮ ಕಟ್ಟೆಯ ಮೇಲೆ ನಮಗೆ ಜಾಗ ಕೊಟ್ರಿ. ಮನೆಯ ಮಗನಾಗಿ ನೋಡಿಕೊಂಡ್ರಿ. ಹೆಜ್ಜೆಗೆ ಹಜ್ಜೆ ಹಾಕಿದ್ರಿ. ಹೆಗಲಿಗೆ ಹೆಗಲು ಕೊಟ್ರಿ. ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಮುಂದುವರೆದ ಹೋರಾಟದಲ್ಲಿ ನಮ್ಮೊಂದಿಗೆ ಉಪವಾಸ ಕೂತ್ರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಸಾ ಬಂಡೂರಿ ಯೋಜನೆಯ ಹೋರಾಟದ ಹೆಜ್ಜೆಗಳನ್ನು ಮೆಲುಕು ಹಾಕಿ ಭಾವುಕರಾದರು.

ಶುಕ್ರವಾರ ನರಗುಂದ ವಿಧಾನಸಭಾ ಮತಕ್ಷೇತ್ರದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ನಿಮ್ಮೆಲ್ಲರ ಒತ್ತಾಸೆಯಂತೆ ಅಂದಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಅಂದಿನ ಜಲಸಂಪನ್ಮೂಲ ಸಚಿವ ಕೆ.ಎಸ್.ಈಶ್ವರಪ್ಪ ಅವರ ಇಚ್ಛಾಶಕ್ತಿಯಿಂದ ಕಳಸಾ ಬಂಡೂರಿಗೆ ಅಡಿಗಲ್ಲು ಹಾಕಲಾಯಿತು. ಅಡಿಗಲ್ಲು ಹಾಕಬಾರದೆಂದು ಪ್ರಯತ್ನಿಸಿದರೂ ದಿಟ್ಟತನದ ನಿರ್ಧಾರದಿಂದ ೨೦೦೮ರಲ್ಲಿ ಜಲಸಂಪನ್ಮೂಲ ಸಚಿವನಾಗಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿತು.

ಈ ಹಿಂದೆಯೇ ಐದೂವರೆ ಕಿ.ಮೀ. ಇಂಟರ್‌ಲಿಂಕ್ ಕ್ಯಾನಲ್ ಪೂರ್ಣಗೊಳಿಸಿದ್ದೇವೆ. ಕೇವಲ ನದಿ ನೀರನ್ನು ಸ್ವಲ್ಪಮಟ್ಟಿಗೆ ತಿರುಗಿಸಿದರೆ ಕಳಸಾ ಬಂಡೂರಿ, ಮಹದಾಯಿ, ಮಲಪ್ರಭೆ ಸೇರುತ್ತದೆ. ಆದರೆ, ಅವತ್ತಿನ ಗೋವಾ ಸರ್ಕಾರ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಒಂದು ಹನಿ ನೀರನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವುದಿಲ್ಲವೆಂದು ಕೋರ್ಟ್‌ಗೆ ಹೋದರು. ಅವತ್ತಿನ ಯುಪಿಎ ಸರ್ಕಾರ ಟ್ರಿಬಿನಲ್ ತೀರ್ಪನ್ನು ನಮ್ಮ ವಿರುದ್ಧ ಮಾಡಿದ್ದನ್ನು ನೆನಪಿಟ್ಟುಕೊಳ್ಳಬೇಕು ಎಂದರು.

‘ಅಂದು ಕಳಸಾ ಬಂಡೂರಿ ವಿರೋಧಿಸಿದವರಿಂದು ಈ ಯೋಜನೆಗಾಗಿ ಪಾದಯಾತ್ರೆ ಮಾಡಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ, ಟ್ರಬಿನಲ್‌ಗೆ ಹೋಗಿ ನ್ಯಾಯ ಕೊಡುವಂತೆ ಆಗ್ರಹಿಸಿದ ಸಂದರ್ಭದಲ್ಲಿ ಮಹದಾಯಿಯನ್ನು ಮಲಪ್ರಭೆಗೆ ಜೋಡಿಸುವ ಇಂಟರ್‌ಲಿಂಕ್ ಕೆನಾಲ್‌ಗೆ ನೀರು ಹರಿಸುವುದಿಲ್ಲ, ನಾವು ನೀರು ಹರಿಯದಂತೆ ಗೋಡೆ ಕಟ್ಟುತ್ತೇವೆಂದು ಬರೆದು ಕೊಟ್ಟ ಪುಣ್ಯಾತ್ಮರು ಇವರು. ಹೀಗಾಗಿ ನಾವು ಮಾಡಿದ ಕೆನಾಲ್‌ಗೆ ಗೋಡೆ ಕಟ್ಟಿದವರನ್ನು, ಟ್ರಿಬಿನಲ್ ಮಾಡಿದವರನ್ನು, ನೀರು ಕೊಡುವುದಿಲ್ಲವೆಂದು ಹೇಳಿದವರನ್ನು ಬೆಂಬಲಿಸಬೇಕೋ? ಬೇಡವೋ? ಎಂಬ ತೀರ್ಮಾನ ನಿಮ್ಮದು ಎಂದು ಹೇಳಿದರು.

‘ಸುಮಾರು ಏಳು ವರ್ಷ ಅವರ ಕೈಯಲ್ಲಿ ಅಧಿಕಾರವಿತ್ತು. ಬಹುತೇಕ ಕಾಮಗಾರಿಗಳನ್ನು ನಾವು ಪೂರ್ಣಗೊಳಿಸಿದ್ವಿ. ಅವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ನೀರು ಕೊಟ್ಟು ದೊಡ್ಡ ಹೆಸರು ಮಾಡಿಕೊಳ್ಳಬಹುದಿತ್ತು. ಆದರೆ, ಈ ವೇಳೆ ರೈತ ಸಂಘಟನೆಗಳು ಹೋರಾಟ ಮಾಡಿದರೆ ಲಾಟಿ ಏಟಿನಿಂದ ಹೊಡೆದು ಹೋರಾಟ ಹತ್ತಿಕ್ಕಲು ಯತ್ನಿಸಿದವರು ಯಾರು?. ನವಲಗುಂದ, ನರಗುಂದದ ಮನೆಯಲ್ಲಿ ಗಂಡುಮಕ್ಕಳು ಇಲ್ಲದಾಗ ಹೆಣ್ಣುಮಕ್ಕಳನ್ನು ಬೂಟುಗಾಲಿನಲ್ಲಿ ಒದ್ದವರು ಯಾರು? ಎಂಬುವುದನ್ನು ಮರೆಯದೆ ನೆನಪಿಟ್ಟುಕೊಳ್ಳಬೇಕು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.

‘ಯಾವುದೇ ಹೋರಾಟ ಮಾಡುವಾಗ ಬದ್ಧತೆ ಇರಬೇಕಾಗುತ್ತದೆ. ಈಗ ನಾವು ಮಹದಾಯಿ ಕಾಮಗಾರಿ ಅನುಷ್ಠಾನಗೊಳಿಸಲು ಕೈಗೆತ್ತಿಕೊಂಡಿದ್ದು, ಅದಕ್ಕಾಗಿ ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ೧,೦೦೦ ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ ಮೀಸಲಿಟ್ಟಿರುವ ಅನುದಾನ ಬಳಕೆ ಮಾಡಬೇಕು ಎಲ್ಲ ಅನುಮತಿ ಕೊಡಿ ಎಂದು ಕೇಂದ್ರ ಜಲಸಂಪನ್ಮೂಲ ಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದು, ಮಾಡಿಕೊಡುತ್ತೇನೆಂದು ಭರವಸೆ ನೀಡಿದ್ದಾರೆ. ಕಾನೂನಿನನ್ವಯ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆಂದ ಅವರು, ಅಧಿಕಾರದಲ್ಲಿ ಇರಲಿ, ಇರದಿರಲಿ ನಮ್ಮ ಬದ್ಧತೆ ಸದಾ ಇರುತ್ತದೆ. ಯಲ್ಲಮ್ಮನ ಅಡಿಯಿಂದ ಬಾದಾಮಿ, ಬನಶಂಕರಿಯ ಮುಡಿವರೆಗೂ ಮಹದಾಯಿ ಹರಿಯಬೇಕು ಎಂಬುವುದು ನಮ್ಮ ಇಚ್ಛಾಶಕ್ತಿಯಾಗಿದೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಇದೇ ವೇಳೆ ಕರ್ನಾಟಕ ಕೊಳಚೆ ನಿರ್ಮಾಣ ಮಂಡಳಿಯಿಂದ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಕ್ಕುಪತ್ರ ವಿತರಿಸಿದರು.

ಸಿ.ಸಿ.ಪಾಟೀಲ ಮಾತನಾಡಿ, ಏಳು ಲಿಪ್ಟ್ ಇರಿವೇಷನ್ ಲಿಸ್ಟ್ ಮಾಡಿದ್ದರು. ಕಳಪೆ ಮಟ್ಟದ ಕಾಮಗಾರಿಯಿಂದ ನೀರಾವರಿ ಸೌಲಭ್ಯ ಸಿಕ್ಕಿಲ್ಲ. ೯೨ ಕೋಟಿ ರೂ. ನೀಡಿದರೆ ಹತ್ತು ಸಾವಿರ ರೈತರಿಗೆ ಅನುಕೂಲ ಆಗಲಿದೆ.

ಈ ಸಂದರ್ಭದಲ್ಲಿ ಸಚಿವರಾದ ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ, ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ.ಗದ್ದಿಗೌಡರ, ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವ್ಹಿ.ಸಂಕನೂರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ರೈತ ಯಾರಿಗೂ ಸೇರಿಲ್ಲ, ಎಲ್ಲರೂ ರೈತರಿಗೆ ಸೇರಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ರೈತರು, ನೆಲ, ಜಲದ ವಿಷಯ ಬಂದಾಗ ಎಲ್ಲರೂ ಒಂದಾಗಿ ನಿಲ್ಲಬೇಕು. ಅಂದಾಗ ರೈತರ, ರಾಜ್ಯದ ಹಿತಾಸಕ್ತಿ ಕಾಪಾಡಲು ಸಾಧ್ಯ. ನೀರಾವರಿ ಯೋಜನೆಗಳು ಪರಿಪೂರ್ಣತೆಯಾದಾಗ, ರೈತನ ಬೆವರಿನ ಹನಿ ಭೂಮಿಗೆ ಬಿದ್ದಾಗ ಭೂತಾಯಿ ಬಂಗಾರದ ಬೆಳೆ ಕೊಡುತ್ತಾಳೆ’.

ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!