ರೌಡಿಶೀಟರ್ ಪುಂಡಾಟ, ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ, ಬೈಕ್ ಗೆ ಬೆಂಕಿ; ಬೆಟಗೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಗದಗ:

ಮಹಿಳೆಗೆ ಮೆಸೇಜ್ ಮಾಡುವಲ್ಲಿ ಉಂಟಾದ ವೈಷಮ್ಯದಿಂದಾಗಿ ವ್ಯಕ್ತಿವೊರ್ವನಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಬೆಟಗೇರಿಯ ಮಂಜುನಾಥ ನಗರದಲ್ಲಿ ಶನಿವಾರ ನಡೆದಿದ್ದು, ಘಟನೆಯ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಗಜೇಂದ್ರಸಿಂಗ್ ಎಂಬ ವ್ಯಕ್ತಿಯೇ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ರೌಡಿಶೀಟರ್ ಆಗಿರುವ ಶಿವರಾಜ್ ಪೂಜಾರ ಎಂಬುವವನು ಚಾಕು ಇರಿದಿದ್ದಾನೆ. ಅಷ್ಟೇ ಅಲ್ಲದೆ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಮಹಿಳೆಗೆ ಮೆಸೇಜ್ ಮಾಡುವಲ್ಲಿ ಉಂಟಾದ ವೈಷಮ್ಯದಿಂದಾಗಿ ರೌಡಿ ಶೀಟರ್ ಶಿವರಾಜ್ ಹಾಗೂ ಆತನ ಹಿಂಬಾಲಕ, ಶುಕ್ರವಾರ ಸಂಜೆ ಗಜೇಂದ್ರಸಿಂಗ್ ಮನೆಗೆ ಬಂದು ದಮ್ಕಿ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಕುಟುಂಬಸ್ತರು ಆರೋಪಿಸಿದ್ದಾರೆ.

ರೌಡಿ ಶೀಟರ್ ಶಿವರಾಜ್ ಪೂಜಾರ್ ಗೆ ಗಜೆಂದ್ರಸಿಂಗ್ ಮತ್ತು ಆತನ ಸಹೋದರ ಸೇರಿ ಶುಕ್ರವಾರ ಹಲ್ಲೆ ಮಾಡಿದ್ದರ ಬಗ್ಗೆ ಕೇಳಲು ಹೋದಾಗ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಶಿವರಾಜ್ ಹಾಗೂ ‌ಗಜೇಂದ್ರಸಿಂಗ್ ಮಧ್ಯೆ ಪರಸ್ಪರ ಚಾಕು ಇರಿತವಾಗಿದೆ. ಆದರೆ ಶಿವರಾಜ್ ನ ಬಲವಾದ ಚಾಕು ಇರಿತದಿಂದ ಗಜೇಂದ್ರ ನಿಗೆ ತೀವ್ರ ರಕ್ತಸ್ರಾವ ಆಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಗಜೇಂದ್ರ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ಗಜೇಂದ್ರ ಸಿಂಗ್

ಇನ್ನು ಸ್ನೇಹಿತ ಗಜೇಂದ್ರಸಿಂಗ್‌ನಿಗೆ ಚಾಕು ಇರಿದಿದ್ದಕ್ಕೆ ಆಕ್ರೋಶಗೊಂಡ ಗಜೇಂದ್ರನ ಹಿಂಬಾಲಕರು ಶಿವರಾಜ್ ಪೂಜಾರ್ ಹಾಗೂ ಮಲ್ಲೇಶ್ ಕಣಕೆ ಎಂಬುವವರಿಗೆ ಚಾಕು ಹಾಕಿದ್ದಾರೆ. ಸದ್ಯ ಈ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಬೆಟಗೇರಿಯ ಮಂಜುನಾಥ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬೀಡುಬಿಟ್ಟಿದ್ದಾರೆ.

ಪರಸ್ಪರ ಚಾಕು ಇರಿದಿರುವವರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಗಜೇಂದ್ರಸಿಂಗ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ, ಶಿವರಾಜ್ ಪೂಜಾರ್ ಕಳೆದ ನಗರಸಭೆ ಚುನಾವಣೆಯಲ್ಲಿ ೪ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯ ಪತಿಯ ಸಹೋದರನಾಗಿದ್ದಾನೆ. ನಗರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಗಜೇಂದ್ರಸಿಂಗ್ ಪ್ರಚಾರ ಮಾಡಿದ್ದನಂತೆ. ಇದು ಶಿವರಾಜ್ ಪೂಜಾರ್‌ನನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷದಿಂದಲೇ ನಿನ್ನೆ(ಏ.೧೫) ಶಿವರಾಜ್ ಗಜೇಂದ್ರನನ್ನು ಥಳಿಸಿದ್ದನಂತೆ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಗೆ ಬಂದ ಗಜೇಂದ್ರನ ಮನೆಯವರು ಮೌಖಿಕವಾಗಿ ಪೊಲೀಸರಿಗೆ ತಿಳಿಸಿದ್ದರಂತೆ. ಆದರೆ, ಪೊಲೀಸರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಕ್ರಮ ಕೈಗೊಂಡಿದ್ದರೆ, ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಗಜೇಂದ್ರನ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ಎಸ್ಪಿ ಶಿವಪ್ರಕಾಶ್ ದೇವರಾಜು ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ