ನವದೆಹಲಿ: ದೇಶಾದ್ಯಂತ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಸತತ 13ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು.
ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಮೊಳಗಿದರೆ, 21 ಗನ್ ಸಲ್ಯೂಟ್ ನೀಡಲಾಯಿತು. ಇದೇ ವೇಳೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಠಿ ನಡೆಸಲಾಯಿತು.
ಇದಕ್ಕೂ ಮುನ್ನ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ, ಬಳಿಕ ಕೆಂಪುಕೋಟೆಗೆ ಆಗಮಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಹಾಗೂ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರನ್ನು ಸ್ವಾಗತಿಸಿದರು. ನಂತರ ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ರಾಜೇಶ್ ಸೇಥಿ ಅವರನ್ನು ಪ್ರಧಾನಿಗೆ ಪರಿಚಯಿಸಲಾಯಿತು.
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಅವರಿಗೆ ಗಾರ್ಡ್ ಆಫ್ ಆನರ್ ಸಲ್ಲಿಸಲಾಯಿತು. ವಿಶೇಷವೆಂದರೆ, ಈ ಬಾರಿ ವಂದೇ ಮಾತರಂ ಗೀತೆಗೆ 150ನೇ ವರ್ಷಾಚರಣೆ ಹಿನ್ನೆಲೆ ರಾಷ್ಟ್ರಗೀತೆಗೆ ಮುನ್ನ ಇದೇ ಮೊದಲ ಬಾರಿಗೆ ಕೆಂಪುಕೋಟೆಯಲ್ಲಿ ವಂದೇ ಮಾತರಂ ಗೀತೆ ಮೊಳಗಿಸಲಾಯಿತು.
ಸಮಾರಂಭಕ್ಕೆ ದೇಶದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 5,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಯುವ ಆವಿಷ್ಕಾರಕರು, ‘ಮೈ ಭಾರತ್’ ಸ್ವಯಂಸೇವಕರು, ವಿದ್ಯಾರ್ಥಿಗಳು, ಸ್ವಚ್ಛತಾ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹಾಗೂ ಪಿಎಂ ವಿಶ್ವಕರ್ಮಾ ಯೋಜನೆ ಫಲಾನುಭವಿಗಳು ಸೇರಿದಂತೆ ವಿವಿಧ ವರ್ಗದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.



