ಪ್ರತ್ಯೇಕ ಪ್ರಕರಣ; ಜಿಲ್ಲೆಯಲ್ಲಿ ಸಿಡಿಲಿಗೆ ಮೂವರು ಸ್ಥಳದಲ್ಲೇ ಸಾವು

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಶಿರಹಟ್ಟಿ:

ಶನಿವಾರ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಸುರಿದ ಮಳೆಗೆ ಕುರಿಗಾಯಿ, ಮಾವಿನ ಮರಗಳ ಕಾವಲುಗಾರ ಹಾಗೂ ದನಗಾಯಿ ಅಸುನೀಗಿರುವ ಎರಡು ಪತ್ಯೇಕ ಘಟನೆಗಳು ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ನಡೆದಿವೆ.

ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಹನುಮಂತಪ್ಪ ಸಿದ್ದಪ್ಪ ಮನ್ನಾಪುರ (೨೨) ಎಂಬ ಕುರಿಗಾಹಿ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಕುರಿಗಳನ್ನು ರಕ್ಷಿಸಲು ಹೋಗಿ ಹನುಮಂತಪ್ಪ ಮನ್ನಾಪುರ ಜೀವ ಕಳೆದುಕೊಂಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಕಂದಾಯ ನಿರೀಕ್ಷಕ ಎಂ.ಎ.ನದಾಫ. ಉಪ ತಹಶಿಲ್ದಾರ ಸಿ‌.ಕೆ.ಬಳೂಟಗಿ. ಗ್ರಾಮಲೆಕ್ಕಾಧಿಕಾರಿ ಕು.ಸೌಮ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅದರಂತೆ, ಶಿರಹಟ್ಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನದಿಂದಲೂ ಮೋಡ ಕವಿದ ವಾತಾವರಣವಿತ್ತು, ಸಂಜೆ ಸುರಿದ ಗುಡುಗು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಜಮೀನಿನಲ್ಲಿರುವ ಮಾವಿನ ಮರದ ಕೆಳಗೆ ದನ ಮೇಯಿಸಲು ತೆರಳಿದ್ದ ಶಿರಹಟ್ಟಿ ತಾಲೂಕಿನ ಹರಿಪುರ ಗ್ರಾಮದ ಮುರುಗೇಶ್ ಈಶ್ವರಪ್ಪ ಹೊಸಮನಿ(೪೪), ಮಾವಿನ ಮರ ಕಾಯುತ್ತಿದ್ದ ಖಾನಾಪುರ ಗ್ರಾಮದ ಬಾಬುಸಾಬ್ ಖಾದಿರಸಾಬ್ ದೊಡ್ಡಮನಿ(೫೫) ಎಂಬುವವರು ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷ್ಮೇಶ್ವರ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದರೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ತುಂತುರು ಮಳೆಯಾಯಿತು. ಬಿಸಿಲಿನ ಬೇಗೆಯಿಂದ ಬಳಲಿದ್ದ ಭೂಮಿಗೆ ತಂಪೆರೆಯಿತು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ