ಹಾಸನ: ಜನರು ಮನೆಯಲ್ಲಿದ್ದಾಗಲೇ ಬೆದರಿಸಿ ದರೋಡೆ ನಡೆಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಎರಡು ಪ್ರತ್ಯೇಕ ದರೋಡೆ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 19.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಜಾಡು ಹಿಡಿದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ.
ಪೊಲೀಸರ ಮಾಹಿತಿ ಪ್ರಕಾರ, ಜೂನ್ 2ರಂದು ಆಲೂರು ತಾಲೂಕಿನ ಮಣಿಪುರ ಗ್ರಾಮದ ನಿವೃತ್ತ ನೌಕರ ಚಂದ್ರಶೇಖರಯ್ಯ ಅವರ ಮನೆಯಲ್ಲಿ ಮೊದಲ ದರೋಡೆ ನಡೆದಿತ್ತು. ಬಳಿಕ ಜುಲೈ 22ರಂದು ಈಶ್ವರಹಳ್ಳಿ ಕೂಡುಗೆ ಗ್ರಾಮದ ಮಂಜೆಗೌಡ ಅವರ ಮನೆಯಲ್ಲಿ ಮತ್ತೊಂದು ದರೋಡೆ ನಡೆದಿತ್ತು.
ಎರಡೂ ಪ್ರಕರಣಗಳಲ್ಲಿ ಸುಮಾರು 19.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಆರೋಪಿಗಳು ರಾಷ್ಟ್ರೀಯ ಹೆದ್ದಾರಿ-75ರ ಪಕ್ಕದಲ್ಲಿರುವ ಒಂಟಿ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಸಿಟಿವಿ, ಮೊಬೈಲ್ ಜಾಡು ಹಿಡಿದು ಕಾರ್ಯಾಚರಣೆ:
ಪ್ರಕರಣದ ಗಂಭೀರತೆ ಅರಿತ ಎಸ್ಪಿ ಶುಭಾನ್ವಿತ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆಗಸ್ಟ್ 7ರಂದು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ದಕ್ಷಿಣ ಕನ್ನಡದ ಅಶ್ರಫ್, ಇಬ್ರಾಹಿಂ, ಹಾವೇರಿಯ ಈರಣ್ಣ, ಹಮೀದ್, ಸಂಕೇತ್, ರಘು, ಹಾಗೂ ಹಾಸನ ಮೂಲದ ಸುಲೈಮಾನ್ ಮತ್ತು ಭರತ್ ಎಂದು ಗುರುತಿಸಲಾಗಿದೆ.
ಬಂಧಿತ ಇಬ್ರಾಹಿಂ ಮತ್ತು ಈರಣ್ಣ ವಿರುದ್ಧ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



