ಪಾಟ್ನಾ: ಬಿಹಾರದ ಲಖಿಸರಾಯ್ ಜಿಲ್ಲೆಯ ಪ್ರಸಿದ್ಧ ಅಶೋಕ ಧಾಮ ದೇವಾಲಯದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದಂದು ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 7 ಭಕ್ತರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಶಿವನಿಗೆ ಜಲಾಭಿಷೇಕ ಸಲ್ಲಿಸಲು ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಾಲಯದತ್ತ ಹರಿದು ಬಂದಿದ್ದರು. ಬೆಳಗ್ಗೆ 6.30ರಿಂದ 6.45ರ ನಡುವೆ ಸಮೀಪದ ರೈಲು ನಿಲ್ದಾಣಕ್ಕೆ ಎರಡು ರೈಲುಗಳು ಬಂದ ಬಳಿಕ ಭಕ್ತರ ಸಂಖ್ಯೆ ಏಕಾಏಕಿ ಹೆಚ್ಚಾಗಿ, ಸುಮಾರು 50 ಸಾವಿರಕ್ಕೂ ಹೆಚ್ಚು ಜನ ದೇವಾಲಯದ ಆವರಣದಲ್ಲಿ ಸೇರಿದ್ದರು.
ಜನದಟ್ಟಣೆ ಹೆಚ್ಚಿದ ಪರಿಣಾಮ ದೇವಾಲಯದ ಬ್ಯಾರಿಕೇಡ್ನ ಒಂದು ಭಾಗ ಮುರಿದು ಬಿದ್ದಿದೆ. ಇದರಿಂದ ಭಕ್ತರು ಒಬ್ಬರ ಮೇಲೊಬ್ಬರು ಬಿದ್ದಿದ್ದು, ಕ್ಷಣಾರ್ಧದಲ್ಲೇ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಲಖಿಸರಾಯ್ ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ.
ಘಟನೆಯ ವೇಳೆ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಬಿದ್ದಿದ್ದು, ಅದರಲ್ಲಿ ವಿದ್ಯುತ್ ಹರಿಯುತ್ತಿದೆ ಎಂಬ ವದಂತಿ ಹರಡಿತ್ತು. ಈ ಸುದ್ದಿ ಕೇಳಿ ಭಕ್ತರು ದಿಕ್ಕಾಪಾಲಾಗಿ ಓಡತೊಡಗಿದ್ದು, ಹಲವರು ಕೆಳಗೆ ಬಿದ್ದು ತುಳಿತಕ್ಕೆ ಸಿಲುಕಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ದುರಂತಕ್ಕೆ ನಿಖರ ಕಾರಣ ಏನು ಎಂಬುದನ್ನು ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.
ಗಾಯಗೊಂಡವರನ್ನು ಲಖಿಸರಾಯ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರಲ್ಲಿ ಹಾಗೂ ಗಾಯಾಳುಗಳಲ್ಲಿ ಹೆಚ್ಚಿನವರು ಮಹಿಳೆಯರು ಎಂದು ತಿಳಿದುಬಂದಿದೆ. ಘಟನೆ ಬಳಿಕ ಪೊಲೀಸರು, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
2019ರಲ್ಲೂ ನಡೆದಿತ್ತು ಕಾಲ್ತುಳಿತ:
ಅಶೋಕ ಧಾಮ ದೇವಾಲಯವು ಶ್ರಾವಣ ಮಾಸದಲ್ಲಿ ಲಕ್ಷಾಂತರ ಭಕ್ತರನ್ನು ಸೆಳೆಯುವ ಪ್ರಮುಖ ಶಿವ ಕ್ಷೇತ್ರವಾಗಿದೆ. ಇದೇ ದೇವಾಲಯದಲ್ಲಿ 2019ರಲ್ಲೂ ಅತಿಯಾದ ಜನದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿ ಓರ್ವ ಭಕ್ತ ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದರು.



