ಕೋಲ್ಕತ್ತ: ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ಪ್ರಸಿದ್ಧ ತಾರಾಪೀಠದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಶ್ರಾವಣ ಮಾಸದ ಸೋಮವಾರದ ಹಿನ್ನೆಲೆಯಲ್ಲಿ ದೇವಾಲಯ ಪಟ್ಟಣದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಹೋಟೆಲ್‌ನಲ್ಲಿ ಜನಸಂದಣಿ ಹೆಚ್ಚಾಗಿತ್ತು.
ತಾರಾಪೀಠ ಪೊಲೀಸ್ ಠಾಣೆಯಿಂದ ಕೆಲವೇ ಅಂತರದಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲ್ ಬಿದೇಶಿನಿಯ ನೆಲಮಹಡಿಯಲ್ಲಿ ಬೆಳಗ್ಗೆ ಸುಮಾರು 5 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹೊತ್ತಿಕೊಂಡ ವೇಳೆ ಬಹುತೇಕ ಅತಿಥಿಗಳು ಗಾಢ ನಿದ್ದೆಯಲ್ಲಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿ ದಟ್ಟ ಹೊಗೆ ಆವರಿಸಿಕೊಂಡಿದೆ. ಇದರಿಂದ ಅತಿಥಿಗಳು ಹೊರಬರಲು ಪರದಾಡಿದ್ದಾರೆ.
ದಟ್ಟ ಹೊಗೆಯಿಂದ ಉಸಿರಾಟಕ್ಕೂ ತೊಂದರೆ:
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ರಾಂಪುರಹಾಟ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಅಗ್ನಿ ಅವಘಡದಿಂದ ಪಾರಾದ ಅತಿಥಿಯೊಬ್ಬರು, ಕ್ಷಣಾರ್ಧದಲ್ಲಿ ಇಡೀ ಹೋಟೆಲ್ ಹೊಗೆಯಿಂದ ತುಂಬಿಕೊಂಡಿತ್ತು. ಉಸಿರಾಡಲು ಸಾಧ್ಯವಾಗದೆ ಹೊರಹೋಗುವ ದಾರಿ ಹುಡುಕಲು ಪರದಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಹೋಟೆಲ್ ಆಡಳಿತದ ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಆದರೆ ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಘಟನೆ ಬಳಿಕ ಸ್ಥಳೀಯರು, ಸ್ವಯಂಸೇವಕರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮಳೆಯ ಕಾರಣ ಬಹುತೇಕ ಅತಿಥಿಗಳು ನಿದ್ದೆಯಲ್ಲಿದ್ದರಿಂದ ಆರಂಭದಲ್ಲಿ ಬೆಂಕಿಯ ತೀವ್ರತೆ ಅರಿವಾಗಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.



