10 ಲಕ್ಷ ರೂ. ಕಳ್ಳತನ ಪ್ರಕರಣ; ಲಕ್ಷ್ಮೇಶ್ವರ ಪೊಲೀಸರ ಬಲೆಗೆ ಬಿದ್ದ ಅಂತರ್ ಜಿಲ್ಲಾ ಖದೀಮರು

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:

ಲಕ್ಷ್ಮೇಶ್ವರ ಠಾಣೆಯ ಸಿಪಿಐ ವಿಕಾಸ ಲಮಾಣಿ ನೇತೃತ್ವದ ಪೊಲೀಸ್ ತಂಡ ಶನಿವಾರ ಅಂತರ್ ಜಿಲ್ಲಾ ಕಳ್ಳರ ಬಂಧನ ಮಾಡಿ ಬಂಧಿತರಿಂದ 5 ಲಕ್ಷ ನಗದು, ಬೈಕ್ ವಶಪಡಿಸಿಕೊಂಡಿದ್ದಾರೆ.

ಕಳೆದ ಏ.8ರಂದು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಪಟ್ಟಣದ ಗಣ್ಯ ವ್ಯಾಪಾರಸ್ಥರ ಕಾರ್ಖೂನರೊಬ್ಬರು 10 ಲಕ್ಷ ರೂ.ಗಳ ಹಣವನ್ನು ತೆಗೆದುಕೊಂಡು(ಡ್ರಾ) ಬೈಕ್‌ನ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೋಗುವಾಗ ೩ ಜನ ಕಳ್ಳರ ತಂಡ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿಕೊಂಡು ಪರಾರಿಯಾಗಿದ್ದರು.

ಘಟನೆಯಿಂದ ವ್ಯಾಪಾರಸ್ಥರು, ಸಾರ್ವಜನಿಕರು ಭೀತಿಗೊಳಗಾಗಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಸಿಪಿಐ ವಿಕಾಸ ಲಮಾಣಿ ನೇತೃತ್ವದ 5 ಜನ ಪೊಲೀಸರ ತಂಡ 8 ದಿನಗಳ ಕಾಲ ಗದಗ, ಹುಬ್ಬಳ್ಳಿ, ಬೆಳಗಾವಿ, ಭದ್ರಾವತಿ, ಬಾಗೇಪಲ್ಲಿ ಸೇರಿ ಅನೇಕ ಕಡೆ ಸುತ್ತಿದ್ದಾರೆ.

ಜಿಲ್ಲೆಯ ಎಸ್‌ಪಿ ಶಿವಪ್ರಕಾಶ್ ದೇವರಾಜು ಮತ್ತು ಡಿಎಸ್‌ಪಿ ಶಿವಾನಂದ ಪವಾಡಶೆಟ್ಟೆ ಅವರ ಮಾರ್ಗದರ್ಶನದಲ್ಲಿ ಕೊನೆಗೂ ಕಳ್ಳರ ಪತ್ತೇ ಮಾಡಿ ಅವರಿಂದ 5 ಲಕ್ಷ ರೂ.ನಗದು, ಬೈಕ್ ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಂಜಿ ಕೃಷ್ಣಪ್ಪ ಮತ್ತು ಈತನ ಮಗ (ಬಾಲಾಪರಾಧಿ) ಬಂಧಿತರಾಗಿದ್ದಾರೆ. ಇನ್ನೋರ್ವ ಆರೋಪಿತ ಭದ್ರಾವತಿಯ ಪಿ.ಆಂಜನೇಯಲು ನಾಪತ್ತೆಯಾಗಿದ್ದಾನೆ.
ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರಕಾಶ ಡಿ, ಅವರೊಂದಿಗೆ ಸಿಬ್ಬಂದಿಗಳಾದ ಪಿ.ಎಂ.ರಗ್ರೇಜಿ, ಎಂ.ಜಿ.ವಡ್ಡಟ್ಟಿ, ಎಚ್.ಐ.ಕಲ್ಲಣ್ಣವರ, ಡಿ.ಎಸ್.ನದಾಫ್ ಅವರು ಕಾರ್ಯನಿರ್ವಹಿಸಿದ್ದು, ಪೊಲೀಸರ ಕಾರ್ಯಕ್ಕೆ ಪಟ್ಟಣದ ವ್ಯಾಪಾರಸ್ಥರು, ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ