ನವಲಗುಂದ ಪುರಸಭೆ ಕಾಂಗ್ರೆಸ್ ಮಡಿಲಿಗೆ; ಅಧ್ಯಕ್ಷರಾಗಿ ಅಪ್ಪಣ್ಣ ಹಳ್ಳದ, ಉಪಾಧ್ಯಕ್ಷರಾಗಿ ಪದ್ಮಾವತಿ ಪೂಜಾರ ಆಯ್ಕೆ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಅಪ್ಪಣ್ಣ ಹಳ್ಳದ ಹಾಗೂ ಉಪಾಧ್ಯಕ್ಷರಾಗಿ ಪದ್ಮಾವತಿ ಪೂಜಾರ ಶುಕ್ರವಾರ ಆಯ್ಕೆಯಾದರು.

ಅಧ್ಯಕ್ಷ ಅಪ್ಪಣ್ಣ ಹಳ್ಳದ

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಅಪ್ಪಣ್ಣ ಹಳ್ಳದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಾವತಿ ಪೂಜಾರ ನಾಮಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಕಲಾಲ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಗೊಲ್ಲರ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷೆ ಪದ್ಮಾವತಿ ಪೂಜಾರ

ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 17 ಹಾಗೂ ಬಿಜೆಪಿ 6 ಸದಸ್ಯರನ್ನು ಹೊಂದಿತ್ತು. ಗೆಲುವಿಗಾಗಿ ಮ್ಯಾಜಿಕ್ ಸಂಖ್ಯೆ 13 ಪಡೆಯಬೇಕಾಗಿತ್ತು. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಶಿಗ್ಲಿ ಹಾಗೂ ಅಪ್ಪಣ್ಣ ಹಳ್ಳದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗಳಿಗೆಯಲ್ಲಿ ಪಕ್ಷದ ಹಿರಿಯರು ಅಪ್ಪಣ್ಣ ಹಳ್ಳದ ಹೆಸರು ಸೂಚಿಸಿದ್ದರಿಂದ ಅದೃಷ್ಟ ಖುಲಾಯಿಸಿತು.

ಅಪ್ಪಣ್ಣ ಹಳ್ಳದ ವಾರ್ಡ ನಂ.6 ರಿಂದ ಪಕ್ಷೇತರರರಾಗಿ ಗೆದ್ದು ಬಂದು ನಂತರ ಜೆ.ಡಿ.ಎಸ್ ಸೇರ್ಪಡೆಯಾಗಿದ್ದರು. ಬದಲಾದ ರಾಜಕಾರಣದಲ್ಲಿ ಜೆಡಿಎಸ್ ಮುಖಂಡ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರಿಂದ ಜೆ.ಡಿ.ಎಸ್.ನ 9 ಹಾಗೂ ಪಕ್ಷೇತರರಾದ ಅಪ್ಪಣ್ಣ ಹಳ್ಳದ ಈಚೆಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರಿಂದ ಕಾಂಗ್ರೆಸ್ ಬಲ 17 ಕ್ಕೆ ಏರಿಕೆಯಾಗಿ ನಿಚ್ಚಳ ಬಹುಮತ ಇತ್ತು.

ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಹಶೀಲ್ದಾರ್ ಅನೀಲ ಬಡಿಗೇರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಪ್ಪಣ್ಣ ಹಳ್ಳದ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪದ್ಮಾವತಿ ಪೂಜಾರ ಅವರು 13 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.  ಬಿಜೆಪಿಯ ಮಹಾಂತೇಶ ಕಲಾಲ ಹಾಗೂ ಜ್ಯೋತಿ ಗೊಲ್ಲರ ಅವರು ಕೇವಲ 6 ಮತಗಳನ್ನು ಪಡೆದು ಪರಾಜಿತರಾದರು. ಮುಖ್ಯಾಧಿಕಾರಿ ಈರಪ್ಪ ಹಸಬಿ ಉಪಸ್ಥಿತರಿದ್ದರು.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಮಡಿಲಿಗೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಬಣ್ಣ ಎರಚಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿದರು.

ನಾಲ್ವರು ಸದಸ್ಯರು ಗೈರು

ಪ್ರಕಾಶ ಶಿಗ್ಲಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಅಸಮಾದಾನಗೊಂಡ ಅವರ ಬೆಂಬಲಿಗ ಸದಸ್ಯರಾದ ಹುಸೇನಬಿ ಧಾರವಾಡ, ಹನಮಂತ ವಾಲ್ಮೀಕಿ, ಬಾಬಾಜಾನ ಮಕಾನದಾರ ಸೇರಿದಂತೆ ಒಟ್ಟು ನಾಲ್ವರು ಸದಸ್ಯರು ಗೈರಾದರು. ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆ ಎರಡರಲ್ಲೂ ನಿಚ್ಚಳ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದುಕೊಂಡಿದ್ದು ಬಿಜೆಪಿಗೆ ಹಿನ್ನಡೆಯಾದಂತಾಗಿದೆ.  

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ