ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಅವಾಂತರ ಮುಂದುವರಿದಿದ್ದು, ರಸ್ತೆ ಗುಂಡಿ ತಪ್ಪಿಸಲು ಹೋಗುತ್ತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿ ಹೊಡೆದಿರುವ ಘಟನೆ ವರ್ತೂರಿನ ಗುಂಜೂರು ಬಳಿ ನಡೆದಿದೆ.
ರಸ್ತೆಯಲ್ಲಿ ಗುಂಡಿಗಳನ್ನು ತಪ್ಪಿಸಿಕೊಂಡು ಬೈಕ್ ಚಲಾಯಿಸುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟ್ಯಾಂಕರ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ತಕ್ಷಣ ಬೈಕ್ನಿಂದ ಜಿಗಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇನ್ನು ಅಪಘಾತಕ್ಕೆ ಕಾರಣವಾದ ಟ್ಯಾಂಕರ್ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ ಎನ್ನಲಾಗಿದೆ. ಅಪಘಾತದ ಬಳಿಕ ಟ್ಯಾಂಕರ್ ಚಾಲಕ ವಾಹನ ನಿಲ್ಲಿಸದೆ ತೆರಳಲು ಯತ್ನಿಸಿದ್ದು, ಇತರ ವಾಹನ ಸವಾರರು ಟ್ಯಾಂಕರ್ನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ವಾಹನವನ್ನು ಪರಿಶೀಲಿಸಿದಾಗ ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್ ಕೂಡ ಇಲ್ಲದೆ ವಾಹನ ಚಲಾಯಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ರಸ್ತೆ ಗುಂಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ:
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಕೆಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ನಡೆದಿವೆ. ಆದರೂ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಗುಂಡಿ ಮುಚ್ಚಲು ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾಗುತ್ತಿದ್ದರೂ, ಗುಂಡಿಗಳು ಮಾತ್ರ ಹಾಗೆಯೇ ಉಳಿದಿವೆ. ಈ ಹಣ ಎಲ್ಲಿ ಹೋಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಗುಂಜೂರು ಭಾಗದಲ್ಲಿ ಅಪಘಾತಕ್ಕೆ ಕಾರಣವಾಗಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚಬೇಕು. ಜೊತೆಗೆ ನಂಬರ್ ಪ್ಲೇಟ್ ಇಲ್ಲದೆ ಹಾಗೂ ಪರವಾನಗಿ ಇಲ್ಲದ ಚಾಲಕರಿಂದ ವಾಹನ ಚಲಾಯಿಸುವುದನ್ನು ತಡೆಯಲು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



