ಎಸ್‌ಎಸ್‌ಎಲ್‌ಸಿ ಫಲಿತಾಂಶ, ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ, ನರಗುಂದ ಫಸ್ಟ್, ಗದಗ ತಾಲ್ಲೂಕು ಲಾಸ್ಟ್!

Vijayasakshi (Gadag News) :

ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ | ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ | 88 ವಿದ್ಯಾರ್ಥಿಗಳು ಟಾಪ್‌ಟೆನ್‌ನಲ್ಲಿ ತೇರ್ಗಡೆ | ರಾಜ್ಯದ ಫಲಿತಾಂಶಕ್ಕಿಂತ ಶೇ.4ರಷ್ಟು ಹೆಚ್ಚಳ | ಗದಗ ಇತಿಹಾಸದಲ್ಲಿಯೇ ಉತ್ತಮ ಫಲಿತಾಂಶ: ಬಸವಲಿಂಗಪ್ಪ

ವಿಜಯಸಾಕ್ಷಿ ಸುದ್ದಿ, ಗದಗ;

ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು, ಗದಗ ಜಿಲ್ಲೆಯು ಶೇ.89.13ರಷ್ಟು ಸಾಧನೆ ಮಾಡುವ ಮೂಲಕ ‘ಎ ಗ್ರೇಡ್ ಪಡೆದುಕೊಂಡಿದೆ.

ಗದಗ ಜಿಲ್ಲೆಯಲ್ಲಿ ಪರೀಕ್ಷೆಗೆ ಗಂಡು 7,447, ಹೆಣ್ಣು 7,956 ಸೇರಿ 15,403 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 6,381 ಗಂಡು ಹಾಗೂ 7,348 ಹೆಣ್ಣು ಸೇರಿ 13,729 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮಾರ್ಚ್ 28 ರಿಂದ ಏಪ್ರಿಲ್ 11ರವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 22 ಸರ್ಕಾರಿ, 06 ಅನುದಾನಿತ ಹಾಗೂ 27 ಅನುದಾನ ರಹಿತ ಸೇರಿ 55 ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿವೆ. ಅದರಂತೆ, ಸರ್ಕಾರಿ ಹಾಗೂ ಅನುದಾನಿತ 3 ಶಾಲೆಗಳು ಶೇ.40ಕ್ಕಿಂತ ಕಡಿಮೆ ಫಲಿತಾಂಶ ಬಂದಿವೆ.

ಗದಗ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು, ಶಾಲೆಗಳಿಗೆ ಕೀರ್ತಿ ತಂದಿದ್ದಾರೆ. ನರಗುಂದ ತಾಲ್ಲೂಕಿನ ಬೆನಕನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ನವೀನಗೌಡ ಮಲ್ಲನಗೌಡರ, ವಾಣಿಶ್ರೀ ಲಕ್ಷ್ಮಣಗೌಡ ಕುಲಕರ್ಣಿ ಹಾಗೂ ಗದಗನ ಲೊಯೊಲಾ ಆಂಗ್ಲ ಮಾಧ್ಯಮ ಶಾಲೆಯ ಮಹೇಕ್ ಆಫ್ರೀನ್ ಜಕ್ಕಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಅದರಂತೆ, 625 ಅಂಕಗಳಿಗೆ 623 ಅಂಕ ಪಡೆಯುವ ಮೂಲಕ 9 ವಿದ್ಯಾರ್ಥಿಗಳು ದ್ವಿತೀಯ ಹಾಗೂ 07 ವಿದ್ಯಾರ್ಥಿಗಳು 622 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನು ಜಿಲ್ಲೆಯಲ್ಲಿಯೇ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರ ಸ್ವಕ್ಷೇತ್ರ ನರಗುಂದ ತಾಲ್ಲೂಕು ಶೇ.91.36ರಷ್ಟು ಫಲಿತಾಂಶದ ಮೂಲ ಉತ್ತಮ ಸಾಧನೆಗೈದಿದ್ದು, ಪ್ರಥಮ ಸ್ಥಾನ ಪಡೆದಿದೆ. ರೋಣ ಶೇ.90.10, ಶಿರಹಟ್ಟಿ ಶೇ.89.93, ಮುಂಡರಗಿ ಶೇ.89.73, ಗದಗ ಗ್ರಾಮೀಣ ಶೇ.88.47 ಹಾಗೂ ಗದಗ ಶಹರ 85.76ರಷ್ಟು ಫಲಿತಾಂಶ ಪಡೆದಿದ್ದು, ಗದಗ ತಾಲ್ಲೂಕು ಅತ್ಯಂತ ಕಳಪೆ ಮಟ್ಟದ ಸಾಧನೆ ಮಾಡುವ ಮೂಲಕ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ರಾಜ್ಯಕ್ಕಿಂತ ಶೇ.4ರಷ್ಟು ಫಲಿತಾಂಶ ಹೆಚ್ಚಳ!

ಗದಗ ಜಿಲ್ಲೆಯಲ್ಲಿ ಒಟ್ಟು 1,873 ವಿದ್ಯಾರ್ಥಿಗಳು ‘ಎ+, 3,235 ‘ಎ, 3,140 ‘ಬಿ+, 2,992 ‘ಬಿ, 2053 ‘ಸಿ+ ಹಾಗೂ 436 ವಿದ್ಯಾರ್ಥಿಗಳು ‘ಸಿ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇನ್ನು 88 ವಿದ್ಯಾರ್ಥಿಗಳು ಟಾಪ್‌ಟೆನ್ 616 ರಿಂದ 624ವರೆಗೆ ಅಂಕ ಪಡೆಯುವ ಮೂಲಕ ಟಾಪ್‌ಟೆನ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಟಾಪ್‌ಟೆನ್ ವಿದ್ಯಾರ್ಥಿಗಳ ಫೈಕಿ ಕನ್ನಡ ಮಾಧ್ಯಮದಲ್ಲಿ 17, ಆಂಗ್ಲ ಮಾಧ್ಯಮದಲ್ಲಿ 71ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಲ್ಲದೆ, ಗದಗ ಜಿಲ್ಲೆ ಶೇ.89.13ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದ ಫಲಿತಾಂಶಕ್ಕಿಂತ ಶೇ.4ರಷ್ಟು ಹೆಚ್ಚಾಗಿದೆ.

ಗದಗ ಜಿಲ್ಲೆಯ ಇತಿಹಾಸದಲ್ಲಿಯೇ ಗದಗ ಜಿಲ್ಲೆ ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿದೆ. ರಾಜ್ಯದ ಫಲಿತಾಂಶಕ್ಕಿಂತ ಶೇ.೪ರಷ್ಟು ಹೆಚ್ಚಾಗಿದ್ದು, ಜಿಲ್ಲೆಯ ಯಾವ ತಾಲ್ಲೂಕುಗಳು ರಾಜ್ಯದ ಫಲಿತಾಂಶಕ್ಕಿಂತ ಕಡಿಮೆ ಬಂದಿಲ್ಲ.

ಜಿ.ಎಂ ಬಸವಲಿಂಗಪ್ಪ, ಡಿಡಿಪಿಐ. ಗದಗ

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಮಗಳ ಸಾಧನೆ ಅಭಿಮಾನ ತರಿಸಿದೆ.

ಮಹಮ್ಮದ್ ಸೈಯದ್ ಜಕ್ಕಲಿ, ಮಹೇಕ್ ಆಫ್ರೀನ್ ತಂದೆ

ಉತ್ತಮ ಫಲಿತಾಂಶದಲ್ಲಿ ಶಾಲೆಯ ಶಿಕ್ಷಕರ ಸಹಕಾರದಿಂದ ಉತ್ತಮ ಫಲಿತಾಂಶ ತೆಗೆಯುವಲ್ಲಿ ಯಶಸ್ವಿಯಾಗಿದ್ದು ಹೆತ್ತವರ ಆಸೆ ಈಡೇರಿಸಿದ ಖುಷಿ ಇದೆ. ಪರೀಕ್ಷೆ ಎದುರಿಸುವುದಕ್ಕಾಗಿ ಪ್ರತಿನಿತ್ಯ ೧೦ ಗಂಟೆಗಳ ಕಾಲ ಅಧ್ಯಯನ ಮಾಡಿದ ಶ್ರಮವಿಂದು ಜಿಲ್ಲೆಗೆ ಪ್ರಥಮ ಸ್ಥಾನ ಬರುವಂತೆ ಮಾಡಿದ್ದು, ಮುಂದೆ ವೈದ್ಯನಾಗಬೇಕೆಂಬ ಕನಸು ಕಂಡಿರುವೆ.

ನವೀನಗೌಡ್ ಮಲ್ಲನಗೌಡರ್. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ

ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ತುಂಬಾ ಸಂತಸ ತಂದಿದೆ. ಸಮಯ ವ್ಯರ್ಥ ಮಾಡದೆ ದಿನಕ್ಕೆ ೮ರಿಂದ ೧೦ ಗಂಟೆಗಳವರೆಗಿನ ನಿರಂತರ ಅಭ್ಯಾಸ, ಪಾಲಕರ, ಶಿಕ್ಷಕರ ಸಹಕಾರ ಉತ್ತಮ ಫಲಿತಾಂಶ ಬರಲು ಕಾರಣೀಭೂತವಾಗಿದೆ. ಐಎಎಸ್ ಮಾಡುವ ಕನಸು ಕಂಡಿದ್ದು, ಅದಕ್ಕಾಗಿ ಪಿಯುಸಿಯಿಂದಲೇ ಅಗತ್ಯ ತಯಾರಿ ನಡೆಸುವೆ.

ಮಹೇಕ್ ಆಫ್ರೀನ್ ಜಕ್ಕಲಿ. ಪ್ರಥಮ ಸ್ಥಾನ ಪಡೆದ ವಿಧ್ಯಾರ್ಥಿನಿ
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ