ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:
ಗದಗ ಜಿಲ್ಲೆಯ ಹಲವೆಡೆ ಮುಂಗಾರು
ಪೂರ್ವ ಮಳೆಯ ಆರ್ಭಟ ಶುರುವಾಗಿದ್ದು, ಅವಾಂತರ ಸೃಷ್ಟಿಸುತ್ತಿದೆ. ಅಕಾಲಿಕ ಮಳೆಗೆ ಮನೆಗಳು ನೆಲಕಚ್ಚುತ್ತಿದ್ದು, ಮರಗಳು ಧರೆಗುರುಳುತ್ತಿವೆ. ಅಲ್ಲದೆ, ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ.
ಅದರಂತೆ, ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಮಳೆರಾಯನ ಸಿಂಚನ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಹೀಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಲಕ್ಷ್ಮೇಶ್ವರ ತಾಲ್ಲೂಕಿನ ನೆಲೊಗಲ್ ಗ್ರಾಮದ ಹಳ್ಳವೊಂದು ಹರಿಯುತ್ತಿದ್ದು, ಹಳ್ಳದಾಟಲು ಹೋದ ಕಾರು ಸಮೇತ ನಾಲ್ವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬದುಕುಳಿದ ಘಟನೆ ಗುರುವಾರ ರಾತ್ರಿ ಸಂಭವಿಸಿತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೇಶ್ವರ ಪೊಲೀಸರು ಹಾಗೂ ಸಿಪಿಐ ವಿಕಾಸ್ ಲಮಾಣಿ ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ನೆಲೊಗಲ್ ಗ್ರಾಮಸ್ಥರ ಸಹಕಾರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೆಬ್ಬಾಳ ಗ್ರಾಮದವರಾದ ಚನ್ನವೀರಗೌಡ ಪಾಟೀಲ (40), ಡಾ.ಪ್ರಭು ಮನ್ಸೂರ್ (40), ಬಸವನಗೌಡ ತೆಗ್ಗಿನಮನಿ (40) ಹಾಗೂ ಕನಕವಾಡದ ವೀರೇಶ್ ಡಂಬಳ (30) ಕೊಚ್ಚಿ ಹೋಗಿದ್ದರು. ಇನ್ನು ನೀರಿನಲ್ಲಿ ಕೊಚ್ಚಿ ಹೋಗಿದ್ದವರನ್ನು ರಕ್ಷಿಸಿದ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.