ಬೆಂಗಳೂರು: ರಾಜ್ಯದ ಮತದಾರರು ಕಾತರದಿಂದ ಕಾಯುತ್ತಿರುವ ಎಸ್‌ಐಆರ್ ಕರಡು ಮತದಾರರ ಪಟ್ಟಿ ಇಂದು ಬಿಡುಗಡೆಯಾಗಲಿದೆ.
ಕರಡು ಪಟ್ಟಿ ಪ್ರಕಟವಾದ ಬಳಿಕ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ.
ಎಸ್‌ಐಆರ್ ಮನೆ ಮನೆ ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಒಟ್ಟು 5.55 ಕೋಟಿ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿ, ಮತದಾರರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಇದೀಗ ಅದರ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ರಾಜ್ಯದಲ್ಲಿ ಸುಮಾರು 4.34 ಕೋಟಿ ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗಲಿವೆ. ಮತ್ತೊಂದೆಡೆ ಸುಮಾರು 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ (ASDDO) ಎಂದು ಗುರುತಿಸಲಾಗಿದ್ದು, ಅವರ ಹೆಸರುಗಳು ಕರಡು ಪಟ್ಟಿಯಲ್ಲಿ ಪ್ರಕಟವಾಗುವುದಿಲ್ಲ.
ಇದೇ ವೇಳೆ ಮ್ಯಾಪಿಂಗ್ ಆಗದಿರುವ 43.84 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಈ ಪೈಕಿ ಬೆಂಗಳೂರಿನಲ್ಲೇ ಸುಮಾರು 23 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಯಾರಿಗೆ ನೋಟಿಸ್?
ಮತದಾರರ ಹೆಸರು ಮ್ಯಾಪಿಂಗ್ ಆಗದಿರುವವರಿಗೆ ನೋಟಿಸ್ ನೀಡಲಾಗುತ್ತದೆ. ಮತದಾರರ ಸ್ಥಳ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಟಿಸ್ ಜಾರಿ ಮಾಡಿ, ಬಿಎಲ್‌ಒಗಳ ಮೂಲಕ ಪರಿಶೀಲನೆ ನಡೆಸಲಾಗುತ್ತದೆ.
ನೋಟಿಸ್ ಪಡೆದ ಮತದಾರರು ತಾವು ಅರ್ಹ ಮತದಾರರು ಎಂಬುದನ್ನು ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಚುನಾವಣಾ ಆಯೋಗ ಸೂಚಿಸಿರುವ 12 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬಹುದಾಗಿದೆ.
ನೋಟಿಸ್ ಪಡೆದ 7 ದಿನಗಳೊಳಗೆ ಪ್ರತಿಕ್ರಿಯೆ ನೀಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳ ಪರಿಶೀಲನೆಯ ಬಳಿಕ ಅರ್ಹತೆ ಹೊಂದಿರುವ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಅವಕಾಶವಿದೆ.
ಮತದಾರರು ಹೆಸರು ಪರಿಶೀಲಿಸಿಕೊಳ್ಳಬಹುದು:
ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಚುನಾವಣಾ ಆಯೋಗದ ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳು ಹಾಗೂ ಬಿಎಲ್‌ಒ ಕಚೇರಿಗಳಲ್ಲಿ ಕರಡು ಪಟ್ಟಿ ಲಭ್ಯವಾಗಲಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ಯಾವುದೇ ದೋಷ ಕಂಡುಬಂದರೆ, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ ನೀಡಲಾಗಿದೆ.
ಹೊಸ ಮತದಾರರು ಫಾರಂ-6 ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಆಕ್ಷೇಪಣೆ, ತಿದ್ದುಪಡಿ ಹಾಗೂ ಹೊಸ ಸೇರ್ಪಡೆಗಳ ಬಳಿಕ ಮತದಾರರ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಕ್ಟೋಬರ್ 10ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.

