ಉಡುಪಿ: ಹೆತ್ತ ತಂದೆ-ತಾಯಿಯನ್ನೇ ಮಗ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ದಾರುಣ ಘಟನೆ ಬ್ರಹ್ಮಾವರ ಸಮೀಪದ ಗಾಂಧಿನಗರದಲ್ಲಿ ನಡೆದಿದೆ. ಮನೆಯಲ್ಲಿ ನಡೆದ ಜಗಳದ ಬಳಿಕ ಶಾಹಿದ್ ಅಲಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ದಂಪತಿಯನ್ನು ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಮತ್ತು ಶಂಶಾದ್ ಬೇಗಂ ಎಂದು ಗುರುತಿಸಲಾಗಿದೆ. ಮೆಹಬೂಬ್ ಅಲಿ ಲಾರಿ ಚಾಲಕರಾಗಿದ್ದು, ಪುತ್ರ ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಭಾನುವಾರ ರಾತ್ರಿ ಮನೆಯಲ್ಲೇ ತಂದೆ-ತಾಯಿ ಹಾಗೂ ಶಾಹಿದ್ ಅಲಿ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ಜಗಳ ತೀವ್ರಗೊಂಡ ವೇಳೆ ಶಾಹಿದ್ ಅಲಿ ಸುತ್ತಿಗೆಯಿಂದ ತಂದೆ ಹಾಗೂ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ತಲೆ ಮತ್ತು ದೇಹದ ಭಾಗಗಳಿಗೆ ಸುತ್ತಿಗೆಯಿಂದ ಬಲವಾದ ಹೊಡೆತ ಬಿದ್ದ ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹತ್ಯೆ ನಡೆದ ಬಳಿಕ ಆರೋಪಿ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದ ಬ್ರಹ್ಮಾವರ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಶಾಹಿದ್ ಅಲಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಕುಟುಂಬದಲ್ಲಿ ನಡೆದಿದ್ದ ಕಲಹವೇ ಹತ್ಯೆಗೆ ಕಾರಣವಾಗಿತ್ತೇ ಅಥವಾ ಮತ್ತೇನಾದರೂ ವಿಚಾರ ಇದೆಯೇ ಎಂಬ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



