ಬೆಂಗಳೂರು: ನಗರದ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಪೊಲೀಸರು ಗುಂಡು ಹಾರಿಸಿ ಆರೋಪಿಯೊಬ್ಬನನ್ನು ಬಂಧಿಸಿರುವ ಘಟನೆ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ಜಿಶಾನ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಸೋಮಸುಂದ್ರಪಾಳ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಮಾರಕಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಬಂಡೆಪಾಳ್ಯ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪಿಎಸ್‌ಐ ಸಚಿನ್ ಹಾಗೂ ಸಿಬ್ಬಂದಿ ಸಂದೀಪ್ ಕಾಂಬ್ಳೆ ಸ್ಥಳಕ್ಕೆ ತೆರಳಿದ್ದರು.
ಮಧ್ಯರಾತ್ರಿ ಸುಮಾರು 12.50ರ ವೇಳೆಗೆ ಪೊಲೀಸರು ಜಿಶಾನ್‌ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಬಳಿಕ ಪಿಎಸ್‌ಐ ಸಚಿನ್ ಅವರ ಮೇಲೂ ಹಲ್ಲೆಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪಿಎಸ್‌ಐ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಂದೀಪ್ ಕಾಂಬ್ಳೆ ಹಾಗೂ ಕಾಲಿಗೆ ಗುಂಡೇಟು ಬಿದ್ದ ಆರೋಪಿ ಜಿಶಾನ್ ಇಬ್ಬರನ್ನೂ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



