HomeGadag Newsಜಾತಿಯ ಸಂಕೋಲೆ ಮುರಿದು ಸಮಾನತೆಯ ಬೆಳಕು ಚೆಲ್ಲಿದ ನಾರಾಯಣಗುರು: ಸಿ.ಎನ್. ಶ್ರೀಧರ್

ಜಾತಿಯ ಸಂಕೋಲೆ ಮುರಿದು ಸಮಾನತೆಯ ಬೆಳಕು ಚೆಲ್ಲಿದ ನಾರಾಯಣಗುರು: ಸಿ.ಎನ್. ಶ್ರೀಧರ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜಾತಿ, ಧರ್ಮ, ಮೇಲು-ಕೀಳು ಎಂಬ ಭೇದಭಾವಗಳಿಂದ ಸಮಾಜವನ್ನು ಮುಕ್ತಗೊಳಿಸಿ, ಸಮಾನತೆ ಮತ್ತು ಮಾನವೀಯತೆಯ ಹಾದಿಯಲ್ಲಿ ಮುನ್ನಡೆಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ ನಾರಾಯಣಗುರುಗಳು, ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಹಕ್ಕು ಮತ್ತು ಗೌರವ ದೊರೆಯಬೇಕು ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕವೇ ಸಾರಿದರು ಎಂದು ಹೇಳಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟಿಷರ ಆಡಳಿತದ ಕಾಲದಲ್ಲಿ ಕೇರಳ ಹಾಗೂ ದಕ್ಷಿಣ ಕನ್ನಡ ಭಾಗಗಳಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ತೀವ್ರವಾಗಿತ್ತು. ಸಮಾಜದಲ್ಲಿ ಕೆಲ ವರ್ಗಗಳಿಗೆ ಮಾತ್ರ ಧಾರ್ಮಿಕ ಹಾಗೂ ಸಾಮಾಜಿಕ ಹಕ್ಕುಗಳು ಸೀಮಿತವಾಗಿದ್ದ ಸಂದರ್ಭದಲ್ಲಿ, ನಾರಾಯಣಗುರುಗಳು ಆ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು ಎಂದು ತಿಳಿಸಿದರು.

ಸಾಮಾಜಿಕ ಕಟ್ಟುಪಾಡುಗಳನ್ನು ಪ್ರಶ್ನಿಸಿದ ಅವರು, ಎಲ್ಲರೂ ಸಮಾನರು ಎಂಬ ತತ್ವವನ್ನು ಪ್ರತಿಪಾದಿಸಿದರು. ಕೆಳವರ್ಗದ ಜನರಿಗೂ ಧಾರ್ಮಿಕ ಹಕ್ಕು ದೊರೆಯಬೇಕು ಎಂಬ ಉದ್ದೇಶದಿಂದ ದೇವಾಲಯಗಳನ್ನು ನಿರ್ಮಿಸಿ, ಸಮಾಜದಲ್ಲಿ ಸಮಾನತೆಯ ಹೊಸ ಚಿಂತನೆಗೆ ನಾಂದಿ ಹಾಡಿದರು ಎಂದು ಹೇಳಿದರು.

ಹುಟ್ಟುವಾಗ ಯಾರಿಗೂ ಜಾತಿಯಿಲ್ಲ

‘ಹುಟ್ಟುವಾಗ ಯಾರಿಗೂ ಜಾತಿ ಇರುವುದಿಲ್ಲ, ಸಮಾಜವೇ ಜಾತಿಯನ್ನು ಸೃಷ್ಟಿಸುತ್ತದೆ. ಎಲ್ಲರ ರಕ್ತದ ಬಣ್ಣವೂ ಒಂದೇ’ ಎಂಬ ನಾರಾಯಣಗುರುಗಳ ಚಿಂತನೆ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮಗು ಹುಟ್ಟುವಾಗ ಅದರ ಮನಸ್ಸು ಶುದ್ಧವಾಗಿರುತ್ತದೆ. ಬೆಳೆಯುತ್ತಾ ಹೋದಂತೆ ಸಮಾಜದ ಕಟ್ಟುಪಾಡುಗಳು, ಜಾತಿ ಮತ್ತು ತಾರತಮ್ಯದ ಕಲ್ಪನೆಗಳು ಅದರ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಅಸಮಾನತೆಯ ಮನೋಭಾವದಿಂದ ಹೊರಬಂದು ಮನುಷ್ಯತ್ವದಿಂದ ಬದುಕಲು ಮಹಾನ್ ದಾರ್ಶನಿಕರ ವಿಚಾರಧಾರೆಗಳು ಪ್ರೇರಣೆ ನೀಡುತ್ತವೆ ಎಂದರು.

ನಾರಾಯಣಗುರುಗಳ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಸಮಾನತೆ, ಸಹೋದರತೆ ಹಾಗೂ ಮಾನವೀಯತೆಯ ಸಂದೇಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಸಮಾನತೆಯ ವಿರುದ್ಧ ಅಹಿಂಸೆಯ ಹೋರಾಟ

ಉಪನ್ಯಾಸಕ ಡಾ. ದತ್ತಪ್ರಸನ್ನ ಪಾಟೀಲ ಮಾತನಾಡಿ, ಅಸ್ಪೃಶ್ಯತೆ ಮತ್ತು ಸಾಮಾಜಿಕ ತಾರತಮ್ಯದ ವಿರುದ್ಧ ನಾರಾಯಣಗುರುಗಳು ಅಹಿಂಸಾತ್ಮಕ ಹೋರಾಟ ನಡೆಸುವ ಮೂಲಕ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದು ಹೇಳಿದರು.

‘ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು’ ಎಂಬ ಅವರ ಧ್ಯೇಯವಾಕ್ಯ ಕೇವಲ ಘೋಷಣೆಯಾಗಿರದೆ, ಸಮಾನತೆಯ ಸಮಾಜ ನಿರ್ಮಾಣದ ಮಹತ್ತರ ಸಂದೇಶವಾಗಿದೆ ಎಂದರು.

ಕೇರಳದ ಅರುವಿಪುರಂನಲ್ಲಿ ನೆಯ್ಯಾರ್ ನದಿಯಿಂದ ಶಿಲೆಯೊಂದನ್ನು ತಂದು ಶಿವಲಿಂಗ ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ಆಚರಣೆಗಳ ಮೇಲಿನ ಕೆಲವರ ಏಕಸ್ವಾಮ್ಯವನ್ನು ಪ್ರಶ್ನಿಸಿದರು. ಕೆಳ ಸಮುದಾಯದವರಿಗೂ ಪೂಜಾ ಹಕ್ಕು ದೊರೆಯಬೇಕು ಎಂಬ ಆಶಯದೊಂದಿಗೆ ಅವರು ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು ಎಂದು ವಿವರಿಸಿದರು.

ದೇವಸ್ಥಾನಗಳಲ್ಲಿ ಕನ್ನಡಿಗಳನ್ನು ಪ್ರತಿಷ್ಠಾಪಿಸುವ ಮೂಲಕ ದೇವರು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ಅದ್ವೈತ ತತ್ವವನ್ನು ಜನಸಾಮಾನ್ಯರಿಗೆ ಸರಳವಾಗಿ ತಿಳಿಸಿಕೊಟ್ಟರು ಎಂದರು.

ತಳ ಸಮುದಾಯದವರು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡಿದರು. ಬಾಲ್ಯ ವಿವಾಹ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿದ ಅವರು, ಸರಳ ವಿವಾಹ ಪದ್ಧತಿಗೆ ಒತ್ತು ನೀಡಿದರು ಎಂದು ಹೇಳಿದರು.

ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಹಾಗೂ ದೇವಸ್ಥಾನ ಪ್ರವೇಶಿಸುವ ಹಕ್ಕಿನಿಂದ ವಂಚಿತರಾಗಿದ್ದ ಅಸ್ಪೃಶ್ಯರ ಪರವಾಗಿ ನಡೆದ ವೈಕಂ ಸತ್ಯಾಗ್ರಹ ಸೇರಿದಂತೆ ಸಾಮಾಜಿಕ ಸಮಾನತೆಗಾಗಿ ನಡೆದ ಹೋರಾಟಗಳಿಗೆ ನಾರಾಯಣಗುರುಗಳು ಬೆಂಬಲ ನೀಡಿದ್ದರು. ದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸಮಾನ ಹಕ್ಕು ದೊರಕಿಸಿಕೊಡುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ವಿ. ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣ್ಣಬರಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಮಾಜದಲ್ಲಿ ಜಾತಿ, ಧರ್ಮ ಹಾಗೂ ಮೇಲು-ಕೀಳು ಎಂಬ ಭೇದಭಾವಗಳಿಗೆ ಅವಕಾಶವಿಲ್ಲ. ಪ್ರತಿಯೊಬ್ಬ ಮನುಷ್ಯನನ್ನೂ ಸಮಾನವಾಗಿ ಕಾಣುವ ಮಾನವೀಯತೆಯ ಸಂದೇಶವನ್ನು ನಾರಾಯಣಗುರುಗಳು ನೀಡಿದ್ದಾರೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ.

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img