ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಿಲ್ಲೆಯ ಜನತೆ ಹಾಗೂ ಮಠ-ಮಾನ್ಯಗಳ ಪೂಜ್ಯರ ಆಶೀರ್ವಾದದಿಂದ ತನಗೆ ಕರ್ನಾಟಕ ವಿಧಾನಸಭಾಧ್ಯಕ್ಷರ ಅತ್ಯುನ್ನತ ಹುದ್ದೆ ದೊರೆತಿದ್ದು, ಈ ಜವಾಬ್ದಾರಿಯನ್ನು ಗದಗ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಳಸಿಕೊಳ್ಳುವುದಾಗಿ ವಿಧಾನಸಭಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಮಠಕ್ಕೆ ಆಗಮಿಸಿದ ಅವರು, ಕರ್ತೃ ಶ್ರೀ ಜಗದ್ಗುರು ಫಕೀರೇಶ್ವರರ ಗದ್ದುಗೆಯ ದರ್ಶನ ಪಡೆದು, ಉಭಯ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಮೊದಲ ಅಧಿವೇಶನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಈ ಸಂದರ್ಭದಲ್ಲಿ ವಿವಿಧ ಹೋರಾಟಗಳ ಮುಖಂಡರ ಸಮಸ್ಯೆಗಳ ಪರಿಹಾರದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ಸದನದಲ್ಲಿ ಜನಪರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ತರಬೇಕು. ವಿಶೇಷವಾಗಿ ಗಣಕೀಕರಣ ಹಾಗೂ ಕಾಗದರಹಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಉಪಸಮಿತಿಗಳ ಸಭೆಗಳು ಪ್ರತಿತಿಂಗಳು ನಡೆಯುವಂತಾಗಬೇಕು ಎಂಬ ಉದ್ದೇಶವಿದೆ. ಅಲ್ಲದೆ, ಬೆಂಗಳೂರಿನ ಮಾದರಿಯಲ್ಲಿಯೇ ಬೆಳಗಾವಿಯಲ್ಲೂ ಶಾಸಕರ ಭವನ ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಮಂತ್ರಿ ಆಗಿದ್ದರೆ ಒಂದೇ ಇಲಾಖೆಗೆ ಸೀಮಿತವಾಗುತ್ತಿದ್ದೆ
ಮಂತ್ರಿ ಆಗಿದ್ದರೆ ಕೇವಲ ಒಂದು ಇಲಾಖೆಯ ಜವಾಬ್ದಾರಿಗೆ ಸೀಮಿತವಾಗಬೇಕಾಗುತ್ತಿತ್ತು. ಆದರೆ, ಜನರ ಪ್ರೀತಿ ಮತ್ತು ಬೆಂಬಲದಿಂದ ಇಂದು ವಿಧಾನಸಭಾಧ್ಯಕ್ಷರಂತಹ ಅತ್ಯುನ್ನತ ಹುದ್ದೆ ದೊರೆತಿದೆ. ಈ ಸ್ಥಾನದಲ್ಲಿ ಎಲ್ಲ ಸಚಿವರು ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅವಕಾಶವಿದೆ ಎಂದು ಜಿ.ಎಸ್. ಪಾಟೀಲ ಹೇಳಿದರು.
ಈ ಅಧಿಕಾರವನ್ನು ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಬಳಸಿಕೊಂಡು, ವಿಧಾನಸಭಾಧ್ಯಕ್ಷರ ಹುದ್ದೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯದಲ್ಲಿಯೇ ಅವಿಭಕ್ತ ಕುಟುಂಬದ ಮೌಲ್ಯಗಳನ್ನು ಕಾಣಬೇಕಾದರೆ ಜಿ.ಎಸ್. ಪಾಟೀಲ ಅವರ ಮನೆತನವನ್ನು ನೋಡಬೇಕು. ಅವರಿಗೆ ಇಂತಹ ಮಹತ್ವದ ಹುದ್ದೆ ಬಹಳ ಹಿಂದೆಯೇ ದೊರೆಯಬೇಕಿತ್ತು. ತಡವಾಗಿಯಾದರೂ ಅವರ ವ್ಯಕ್ತಿತ್ವಕ್ಕೆ ತಕ್ಕಂತಹ ಜವಾಬ್ದಾರಿ ದೊರೆತಿರುವುದು ಗದಗ ಜಿಲ್ಲೆಯ ಜನತೆಯ ಸೌಭಾಗ್ಯವಾಗಿದೆ ಎಂದರು.
ಜಗದ್ಗುರು ಫಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಜಿ.ಎಸ್. ಪಾಟೀಲರ ಮನೆತನ ಭಕ್ತಿ ಮತ್ತು ದಾಸೋಹಕ್ಕೆ ಹೆಸರುವಾಸಿಯಾಗಿದೆ. ಹಾಲಿ ಶಾಸಕರಾಗಿದ್ದಾಗಲೂ, ಮಾಜಿ ಶಾಸಕರಾಗಿದ್ದಾಗಲೂ ಒಂದೇ ರೀತಿಯ ಸರಳ ವ್ಯಕ್ತಿತ್ವವನ್ನು ಉಳಿಸಿಕೊಂಡವರು ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡಿನ ಪೂಜ್ಯರ ಆಶೀರ್ವಾದ ಜಿ.ಎಸ್. ಪಾಟೀಲರ ಮೇಲಿರಲಿದೆ. ಅವರು ವಿಧಾನಸಭಾಧ್ಯಕ್ಷರಾಗಿ ಸದನವನ್ನು ನಿರ್ವಿವಾದವಾಗಿ ಹಾಗೂ ಸಮರ್ಥವಾಗಿ ಮುನ್ನಡೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ಫಕೀರೇಶ್ವರ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಡಿ.ಎನ್. ಡಬಾಲಿ, ಹುಮಾಯೂನ್ ಮಾಗಡಿ, ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಗುರನಾಥ ದಾನಪ್ಪನವರ, ಡಿ.ಕೆ. ಹೊನ್ನಪ್ಪನವರ, ಎಲ್.ಡಿ. ಪಾಟೀಲ, ವೀರಣ್ಣ ಅಂಗಡಿ, ಸಿ.ಸಿ. ನೂರಶೆಟ್ಟರ, ಡಾ. ಎಸ್.ಎಂ. ಬುರಬುರೆ, ಪರಮೇಶ ಪರಬ, ಹೊನ್ನಪ್ಪ ಶಿರಹಟ್ಟಿ, ಡಾ. ವಿಜಯದತ್ತ ಮಂಗಸೂಳಿ, ಮಹಾಂತೇಶ ದಶಮನಿ, ವೀರಯ್ಯ ಮಠಪತಿ, ಚಾಂದಸಾಬ ಮುಳಗುಂದ, ಬುಡನಶ್ಯಾ ಮಕಾನದಾರ, ತಹಶೀಲ್ದಾರ ಕೆ. ರಾಘವೇಂದ್ರ ರಾವ್, ಪಿಎಸ್ಐ ಈರಪ್ಪ ರಿತ್ತಿ, ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜನತೆಯ ಪ್ರೀತಿ, ವಿಶ್ವಾಸ ಮತ್ತು ಪೂಜ್ಯರ ಆಶೀರ್ವಾದದಿಂದ ವಿಧಾನಸಭಾಧ್ಯಕ್ಷರಂತಹ ಅತ್ಯುನ್ನತ ಜವಾಬ್ದಾರಿ ದೊರೆತಿದೆ. ಈ ಹುದ್ದೆಯನ್ನು ಕೇವಲ ಸ್ಥಾನಮಾನಕ್ಕಾಗಿ ಬಳಸದೆ, ಗದಗ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಬಳಸಿಕೊಳ್ಳುತ್ತೇನೆ.
– ಜಿ.ಎಸ್. ಪಾಟೀಲ, ವಿಧಾನಸಭಾಧ್ಯಕ್ಷರು



