HomeGadag Newsನುಲಿಯ ಚಂದಯ್ಯನವರ ಕಾಯಕನಿಷ್ಠೆ ಯುವಜನತೆಗೆ ಮಾದರಿ: ಸಿ.ಎನ್. ಶ್ರೀಧರ್

ನುಲಿಯ ಚಂದಯ್ಯನವರ ಕಾಯಕನಿಷ್ಠೆ ಯುವಜನತೆಗೆ ಮಾದರಿ: ಸಿ.ಎನ್. ಶ್ರೀಧರ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ೧೨ನೇ ಶತಮಾನದ ಶಿವಶರಣ ನುಲಿಯ ಚಂದಯ್ಯನವರು ತಮ್ಮ ಬದುಕಿನ ಮೂಲಕ ಸಾರಿದ ಕಾಯಕನಿಷ್ಠೆ ಹಾಗೂ ‘ದುಡಿಮೆಯೇ ದೇವರು’ ಎಂಬ ಸಂದೇಶ ಇಂದಿನ ಆಧುನಿಕ ಸಮಾಜದಲ್ಲಿಯೂ ಅತ್ಯಂತ ಪ್ರಸ್ತುತವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ–೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಸಮಕಾಲೀನರಾಗಿದ್ದ ನುಲಿಯ ಚಂದಯ್ಯನವರು ಕಾಯಕದ ಮೂಲಕ ಜೀವನ ಸಾಗಿಸುತ್ತಿದ್ದರು. ತಮ್ಮ ದುಡಿಮೆಯಿಂದ ಗಳಿಸಿದ ಸಂಪತ್ತಿನಲ್ಲಿಯೇ ಇತರರಿಗೆ ದಾಸೋಹ ಮಾಡುತ್ತಾ, ‘ಕಾಯಕವೇ ಕೈಲಾಸ’ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮಹಾನ್ ಶಿವಶರಣರಾಗಿದ್ದರು ಎಂದು ಹೇಳಿದರು.

ಕಾಯಕಕ್ಕೆ ಗೌರವ ನೀಡುವುದು, ಸ್ವಾವಲಂಬಿಯಾಗಿ ಬದುಕುವುದು, ಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಸಮಾಜದ ಒಳಿತಿಗಾಗಿ ತಮ್ಮದೇ ಆದ ಕೊಡುಗೆ ನೀಡುವುದು ನುಲಿಯ ಚಂದಯ್ಯನವರ ಜೀವನದ ಪ್ರಮುಖ ಸಂದೇಶಗಳಾಗಿವೆ. ಇಂತಹ ಮಹನೀಯರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.

ಹುಲ್ಲಿನಿಂದ ಹಗ್ಗ ಹೊಸೆದು ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ನುಲಿಯ ಚಂದಯ್ಯನವರು ತಮ್ಮ ಕಾಯಕದ ಜತೆಗೆ ದಾಸೋಹ ಹಾಗೂ ಶರಣರ ತತ್ವಗಳನ್ನು ಸಮಾಜದಲ್ಲಿ ಪಸರಿಸುವ ಕಾರ್ಯದಲ್ಲಿಯೂ ನಿರತರಾಗಿದ್ದರು. ಕಲ್ಯಾಣ ಕ್ರಾಂತಿಯ ನಂತರ ಒಂದೆಡೆ ನೆಲೆಸದ ಅವರು ನಾಡಿನಾದ್ಯಂತ ಸಂಚರಿಸಿ ವಚನ ಸಾಹಿತ್ಯ ಹಾಗೂ ಶರಣರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದರು ಎಂದು ತಿಳಿಸಿದರು.

ನಾಗಲಾಂಬಿಕೆ, ಹರಳಯ್ಯ ಸೇರಿದಂತೆ ಹಲವು ಶಿವಶರಣರೊಂದಿಗೆ ಒಡನಾಟ ಹೊಂದಿದ್ದ ಚಂದಯ್ಯನವರು ತಮ್ಮ ತತ್ವಗಳ ಪ್ರಚಾರದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ನುಲೇನೂರಿಗೆ ಆಗಮಿಸಿದ್ದರು. ಅಲ್ಲಿ ಸಾಮಾನ್ಯ ಚಮ್ಮಾರರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಅಲ್ಲಿಯೇ ಕಳೆದರು ಎಂದು ಹೇಳಿದರು.

ಅವರ ವ್ಯಕ್ತಿತ್ವ ಹಾಗೂ ತತ್ವಗಳಿಂದ ಪ್ರಭಾವಿತರಾದ ಸ್ಥಳೀಯರು ಕೆರೆಯ ದಂಡೆಯ ಮೇಲೆ ಅವರಿಗೆ ಸಣ್ಣ ಮಠವೊಂದನ್ನು ನಿರ್ಮಿಸಿಕೊಟ್ಟಿದ್ದರು. ಅಂತಿಮ ದಿನಗಳವರೆಗೂ ಜನಸಾಮಾನ್ಯರಿಗೆ ಕಾಯಕದ ಮಹತ್ವವನ್ನು ಬೋಧಿಸುತ್ತಲೇ ಅವರು ಬದುಕಿದರು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಚಿಕ್ಕ ಕೆಲಸವಾಗಲಿ ಅಥವಾ ದೊಡ್ಡ ಕೆಲಸವಾಗಲಿ, ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದಾಗ ಮಾತ್ರ ಕಾಯಕದಲ್ಲಿ ದೇವರನ್ನು ಕಾಣಲು ಸಾಧ್ಯ. ೧೨ನೇ ಶತಮಾನದಲ್ಲಿ ಶಿವಶರಣರು ಪ್ರತಿಪಾದಿಸಿದ ಶ್ರಮಸಂಸ್ಕೃತಿಯನ್ನು ಇಂದಿನ ಯುವಜನತೆ ಹಾಗೂ ಸಮಾಜ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಿ.ಎನ್. ಶ್ರೀಧರ್ ಹೇಳಿದರು.

ಗದಗ ಶಾಖೆಯ ದಲಿತ ಸಾಹಿತ್ಯ ಅಕಾಡೆಮಿ ಕಾರ್ಯಾಧ್ಯಕ್ಷ ಡಾ. ಶಾಂತಕುಮಾರ ಬಿ. ಭಜಂತ್ರಿ ಉಪನ್ಯಾಸ ನೀಡಿ, ಬಸವಾದಿ ಶರಣರು ಪ್ರತಿಪಾದಿಸಿದ ಸಮಾನತೆ, ಕಾಯಕ ಹಾಗೂ ಸಾಮಾಜಿಕ ನ್ಯಾಯದ ಆಶಯಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದರು.

ಶರಣರ ವಿಚಾರಧಾರೆಗಳು ಸಾಮಾಜಿಕ ಪರಿವರ್ತನೆ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಸುಮಾರು ೭೦ ವರ್ಷಗಳ ಕಾಲ ಬದುಕಿದ್ದ ನುಲಿಯ ಚಂದಯ್ಯನವರ ಕಾಲಘಟ್ಟ ಹಾಗೂ ಜೀವನದ ಕುರಿತು ಇನ್ನಷ್ಟು ಸಮಗ್ರ ಸಂಶೋಧನೆಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾಯಕವೇ ದೇವರೆಂದು ಸಾರಿದ ನುಲಿಯ ಚಂದಯ್ಯನವರ ಕಾಯಕನಿಷ್ಠೆಯನ್ನು ವಿವರಿಸಿದ ಅವರು, ಹಗ್ಗ ಹೊಸೆಯುವ ಕಾರ್ಯದಲ್ಲಿ ಅವರು ಎಷ್ಟರಮಟ್ಟಿಗೆ ತಲ್ಲೀನರಾಗಿದ್ದರು ಎಂಬುದನ್ನು ತಿಳಿಸಿದರು. ಕಾಯಕಕ್ಕೆ ತಕ್ಕ ಪ್ರತಿಫಲ ಮಾತ್ರ ಪಡೆಯುತ್ತಿದ್ದ ಅವರು ಪ್ರಾಮಾಣಿಕತೆ ಮತ್ತು ಶ್ರಮದ ಮೌಲ್ಯಕ್ಕೆ ತಮ್ಮ ಬದುಕಿನ ಮೂಲಕವೇ ಹೊಸ ಅರ್ಥ ನೀಡಿದ್ದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ವಿ. ಬಳ್ಳಾರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಬಾಹುಬಲಿ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು.

ಚಿಕ್ಕ ಕೆಲಸ ಅಥವಾ ದೊಡ್ಡ ಕೆಲಸ ಎಂಬ ಭೇದವಿಲ್ಲದೆ, ಪ್ರತಿಯೊಂದು ಕಾಯಕವನ್ನೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಾಗ ಅದರಲ್ಲಿ ದೇವರನ್ನು ಕಾಣಲು ಸಾಧ್ಯ. ನುಲಿಯ ಚಂದಯ್ಯನವರ ಕಾಯಕನಿಷ್ಠೆ, ಸ್ವಾವಲಂಬನೆ ಮತ್ತು ದಾಸೋಹದ ಬದುಕು ಇಂದಿನ ಯುವಜನತೆಗೆ ಆದರ್ಶವಾಗಬೇಕು.

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img