ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಕೂಲಿ ಕಾರ್ಮಿಕರು ಹಾಗೂ ಕುಟುಂಬಗಳು ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಉದ್ಯೋಗಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ನಮೂನೆ–6 ಸಲ್ಲಿಸಿ ಜಾಬ್ ಕಾರ್ಡ್ ಮಾಡಿಸಿಕೊಳ್ಳುವಂತೆ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಕರೆ ನೀಡಿದರು.
ಗ್ರಾಮೀಣ ಜನರಿಗೆ ತಮ್ಮ ಊರಿನಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ಗ್ರಾಮೀಣ ಕುಟುಂಬಗಳ ವಯಸ್ಕ ಸದಸ್ಯರು ಉದ್ಯೋಗಕ್ಕೆ ಮುಂದೆ ಬಂದಲ್ಲಿ ನಿಯಮಾನುಸಾರ ಕೂಲಿ ಆಧಾರಿತ ಉದ್ಯೋಗ ಒದಗಿಸಲಾಗುತ್ತದೆ. ಇದರಿಂದ ಕುಟುಂಬಗಳಿಗೆ ಆದಾಯದ ಮೂಲ ಕಲ್ಪಿಸುವುದರ ಜತೆಗೆ ಗ್ರಾಮಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಜಾಬ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು ಉದ್ಯೋಗ ಪಡೆಯಲು ಗ್ರಾಮ ಪಂಚಾಯಿತಿಯಲ್ಲಿ ನಮೂನೆ–6 ಮೂಲಕ ಉದ್ಯೋಗದ ಬೇಡಿಕೆ ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನೂ ಜಾಬ್ ಕಾರ್ಡ್ ಮಾಡಿಸಿಕೊಳ್ಳದ ಅರ್ಹ ಕುಟುಂಬಗಳು ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಜಾಬ್ ಕಾರ್ಡ್ ಪಡೆದ ಬಳಿಕ ಕೆಲಸದ ಅಗತ್ಯವಿದ್ದಾಗ ನಮೂನೆ–6 ಸಲ್ಲಿಸಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬಹುದು ಎಂದು ಹೇಳಿದರು.
ರಸ್ತೆ, ಚರಂಡಿ, ಕೆರೆ ಅಭಿವೃದ್ಧಿ, ಜಲ ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಕೃಷಿ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾಮಗಾರಿಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಕಾಮಗಾರಿಗಳ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದ್ದು, ಅರ್ಹರು ಇದರ ಪ್ರಯೋಜನ ಪಡೆಯಬೇಕು ಎಂದು ಕಂದಕೂರ ಹೇಳಿದರು.
ಯೋಜನೆಯ ಸೌಲಭ್ಯ ಪಡೆಯಲು ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಜಾಬ್ ಕಾರ್ಡ್ ಪಡೆಯುವ ಹಾಗೂ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಪ್ರಕ್ರಿಯೆ ಕುರಿತು ಪಂಚಾಯಿತಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ಯೋಜನೆಯ ಕುರಿತು ಮಾಹಿತಿ ನೀಡಬೇಕು. ಹೆಚ್ಚಿನ ಸಂಖ್ಯೆಯ ಅರ್ಹರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೆಲಸ ಬೇಕಿರುವವರು ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ. ಒಂದು ತಿಂಗಳ ಕಾಲ ನಡೆಯುವ ಜಾಬ್ ಕಾರ್ಡ್ ಮೇಳದ ಪ್ರಯೋಜನ ಪಡೆದು ಜಾಬ್ ಕಾರ್ಡ್ ಮಾಡಿಸಿಕೊಳ್ಳಿ. ನಂತರ ನಮೂನೆ–6 ಸಲ್ಲಿಸಿ ಉದ್ಯೋಗಕ್ಕಾಗಿ ಬೇಡಿಕೆ ನೀಡಿ ಸರ್ಕಾರದ ಯೋಜನೆಯ ಸದುಪಯೋಗ ಪಡೆಯಿರಿ.
— ಚಂದ್ರಶೇಖರ ಬಿ. ಕಂದಕೂರ, ಕಾರ್ಯನಿರ್ವಾಹಕ ಅಧಿಕಾರಿ, ರೋಣ ಹಾಗೂ ಗಜೇಂದ್ರಗಡ ತಾಲೂಕು



