ರಾಮನಗರ: ಕನಕಪುರ ತಾಲೂಕಿನ ಬಂಡೆಬಸಪ್ಪನದೊಡ್ಡಿ ಗ್ರಾಮದಲ್ಲಿ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಪರಮಶಿವಯ್ಯ ಅವರಿಗೆ ಸೇರಿದ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ತಡರಾತ್ರಿ ದಿಢೀರನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಮನೆಯಾದ್ಯಂತ ಬೆಂಕಿ ವ್ಯಾಪಿಸಿದೆ.
ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಿನಬಳಕೆಯ ಸಾಮಗ್ರಿಗಳು ಸೇರಿದಂತೆ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯಿಂದ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದ ಎಲ್ಲರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



