ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಗೆ ತಿರುಗಿದ್ದ ಸಂಬಂಧದಲ್ಲಿ ಯುವತಿ ಬೇರೊಬ್ಬನನ್ನು ಮದುವೆಯಾಗಲು ಮುಂದಾದ ಹಿನ್ನೆಲೆ ಆಕ್ರೋಶಗೊಂಡ ಯುವಕನೊಬ್ಬ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ಶಿವಮೊಗ್ಗದ ವೆಂಕಟೇಶ ನಗರದಲ್ಲಿ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ಮಣಿಕಂಠನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠನಿಗೆ ಇನ್‌ಸ್ಟಾಗ್ರಾಂ ಮೂಲಕ ಶಿವಮೊಗ್ಗದ ಯುವತಿಯ ಪರಿಚಯವಾಗಿತ್ತು. ಯುವತಿಯ ಮೇಲಿನ ಪ್ರೀತಿಯಿಂದ ಮಂಡ್ಯದಿಂದ ಶಿವಮೊಗ್ಗಕ್ಕೆ ಬಂದಿದ್ದ ಆತ, ಇಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ.
ಈ ನಡುವೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಯವಾಗಿದ್ದು, ನಿಶ್ಚಿತಾರ್ಥವೂ ನೆರವೇರಿತ್ತು. ಇದರಿಂದ ಅಸಮಾಧಾನಗೊಂಡ ಮಣಿಕಂಠ, ಕಳೆದ ರಾತ್ರಿ ಮದ್ಯ ಸೇವಿಸಿ ಯುವತಿಯ ಮನೆ ಸಮೀಪಕ್ಕೆ ತೆರಳಿದ್ದಾನೆ.
ವೆಂಕಟೇಶ ನಗರದ ತುಂಗಾ ಕಾಲುವೆ ಮುಂಭಾಗದಲ್ಲಿ ನಿಲ್ಲಿಸಿದ್ದ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬೆಂಕಿ ಪಕ್ಕದಲ್ಲಿದ್ದ ಯುವತಿಯ ಸಹೋದರನ ಬೈಕ್‌ಗೂ ತಗುಲಿದ್ದು, ಎರಡು ಬೈಕ್‌ಗಳು ಭಾಗಶಃ ಹಾನಿಗೊಳಗಾಗಿವೆ.
ಘಟನೆಯ ಬಳಿಕ ಬೈಕ್ ಮಾಲೀಕ ಜಯನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ದೃಶ್ಯಾವಳಿಗಳ ಆಧಾರದಲ್ಲಿ ಮಣಿಕಂಠನೇ ಕೃತ್ಯ ಎಸಗಿರುವುದು ದೃಢಪಟ್ಟಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



