HomeGadag Newsಒಣಗಿದ ಹೊಲ..ಮುಗಿಲಿನತ್ತ ರೈತನ ಚಿತ್ತ! ಸಿಎಂ ಭೇಟಿ ಮೇಲೆ ಅನ್ನದಾತರ ಭಾರಿ ನಿರೀಕ್ಷೆ

ಒಣಗಿದ ಹೊಲ..ಮುಗಿಲಿನತ್ತ ರೈತನ ಚಿತ್ತ! ಸಿಎಂ ಭೇಟಿ ಮೇಲೆ ಅನ್ನದಾತರ ಭಾರಿ ನಿರೀಕ್ಷೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಒಂದೆಡೆ ಕಣ್ಣೆದುರೇ ಒಣಗುತ್ತಿರುವ ಬೆಳೆ… ಮತ್ತೊಂದೆಡೆ ತೀರಿಸಲಾಗದ ಸಾಲದ ಹೊರೆ… ಬದುಕು ಸಾಗಿಸುವುದು ಹೇಗೆ ಎಂಬ ಭವಿಷ್ಯದ ಚಿಂತೆ! ಮಳೆಗಾಗಿ ಪ್ರತಿದಿನ ಆಗಸದತ್ತ ಮುಖ ಮಾಡುತ್ತಿರುವ ಅನ್ನದಾತನ ಕಣ್ಣಲ್ಲಿ ಈಗ ನೀರಿಲ್ಲ, ಕೇವಲ ಆತಂಕ ಮತ್ತು ನಿರೀಕ್ಷೆ ಮಾತ್ರ ಉಳಿದಿದೆ.

ಇಂತಹ ಗಂಭೀರ ಬರದ ವಾತಾವರಣದಲ್ಲಿಯೂ ಲಕ್ಷ್ಮೇಶ್ವರ ತಾಲೂಕು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗುಳಿದಿದೆ. ಹೊಲದಲ್ಲಿ ಬೆಳೆ ಒಣಗುತ್ತಿದೆ, ರೈತನ ಬದುಕು ಕಮರುತ್ತಿದೆ. ಆದರೆ ದಾಖಲೆಗಳಲ್ಲಿ ಮಾತ್ರ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿಲ್ಲವೇ ಎಂಬ ಪ್ರಶ್ನೆ ಇದೀಗ ತಾಲೂಕಿನ ರೈತರನ್ನು ಕಾಡುತ್ತಿದೆ.

ಈ ಮಧ್ಯೆ ಇಂದು ಸೆಪ್ಟೆಂಬರ್ ೧ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬರ ಪರಿಸ್ಥಿತಿ ವೀಕ್ಷಣೆಗೆ ಆಗಮಿಸುತ್ತಿರುವುದು ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಮುಖ್ಯಮಂತ್ರಿಗಳ ಭೇಟಿ ಕೇವಲ ಅಧಿಕಾರಿಗಳ ವರದಿ, ಕಡತ ಮತ್ತು ಅಂಕಿ-ಅಂಶಗಳ ಪರಿಶೀಲನೆಗಷ್ಟೇ ಸೀಮಿತವಾಗುತ್ತದೆಯೇ? ಅಥವಾ ಒಣಗಿದ ಹೊಲಗಳಿಗೆ ತೆರಳಿ ಅನ್ನದಾತನ ಕಣ್ಣೀರಿನ ಹಿಂದಿರುವ ನೋವನ್ನು ಖುದ್ದಾಗಿ ಅರಿಯುತ್ತಾರೆಯೇ? ಎಂಬುದು ಈಗ ಲಕ್ಷ್ಮೇಶ್ವರ ತಾಲೂಕಿನ ಬಹುದೊಡ್ಡ ಪ್ರಶ್ನೆಯಾಗಿದೆ.

ಮುಂಗಾರಿನುದ್ದಕ್ಕೂ ಬೆಳೆಗಳಿಗೆ ಅಗತ್ಯವಿದ್ದ ಸಮಯದಲ್ಲಿ ತಾಲೂಕಿನಾದ್ಯಂತ ಸಮರ್ಪಕ ಮಳೆಯಾಗಿಲ್ಲ. ಜುಲೈನಲ್ಲಿ ಸುರಿದ ಅಲ್ಪಸ್ವಲ್ಪ ಮಳೆಯಿಂದ ಹೆಸರು ಬೆಳೆಗೆ ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಇಳುವರಿ ಬಂದಿದೆ ಎನ್ನಲಾಗಿದೆ.

ಆದರೆ ಮೆಕ್ಕೆಜೋಳ, ಶೇಂಗಾ, ಹತ್ತಿ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗಳು ಮಳೆ ಕೊರತೆ ಮತ್ತು ಬಿಸಿಲಿನ ತಾಪಕ್ಕೆ ಒಣಗಿ ಹೋಗುತ್ತಿವೆ. ಹೊಲದಲ್ಲಿನ ಬೆಳೆಯೊಂದಿಗೆ ರೈತರ ಬದುಕಿನ ಭರವಸೆಯೂ ಕಮರಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ತಾಲೂಕಿನ ೩೪,೮೬೬ ಹೆಕ್ಟೇರ್ ಬಿತ್ತನೆ ಗುರಿಯ ಪೈಕಿ ೩೨,೯೨೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅಂದರೆ ಸುಮಾರು ಶೇ.೯೫ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

೨೨,೦೫೦ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ೬,೧೫೦ ಹೆಕ್ಟೇರ್‌ನಲ್ಲಿ ಹೆಸರು, ೩,೦೦೦ ಹೆಕ್ಟೇರ್‌ನಲ್ಲಿ ಶೇಂಗಾ, ೧,೫೦೦ ಹೆಕ್ಟೇರ್‌ನಲ್ಲಿ ಹತ್ತಿ ಹಾಗೂ ೨೨೦ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ.

ಇನ್ನು ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ತೋಟಗಾರಿಕೆ ಬೆಳೆಗಳು ಸುಮಾರು ೨೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲ್ಪಟ್ಟಿವೆ. ಆದರೆ ಮಳೆಯಿಲ್ಲದೆ ಹಲವು ಕಡೆ ಬೆಳೆಗಳು ಒಣಗಿ, ರೈತರು ಹಾಕಿದ ಬಂಡವಾಳವೇ ಮಣ್ಣಿನಲ್ಲಿ ಮಣ್ಣಾಗುವ ಸ್ಥಿತಿ ಬಂದಿದೆ.

ಬೀಜ, ಗೊಬ್ಬರ, ಕ್ರಿಮಿನಾಶಕ, ಕೂಲಿ ಹಾಗೂ ಬಿತ್ತನೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ಇದೀಗ ಸಾಲದ ಹೊರೆ ಹೊತ್ತು, ಮುಂದಿನ ಬದುಕಿನ ಬಗ್ಗೆ ಚಿಂತಿಸುವಂತಾಗಿದೆ.

ಕೆಎಸ್‌ಎನ್‌ಡಿಎಂಸಿ ವರದಿಯ ಪ್ರಕಾರ ತಾಲೂಕಿನಲ್ಲಿ ಶೇ.೨೧ರಷ್ಟು ಮಾತ್ರ ಮಳೆ ಕೊರತೆ ದಾಖಲಾಗಿರುವುದು ಬರಪೀಡಿತ ತಾಲೂಕು ಘೋಷಣೆಗೆ ಪ್ರಮುಖ ಅಡ್ಡಿಯಾಗಿದೆ ಎನ್ನಲಾಗುತ್ತಿದೆ.

ಆದರೆ ರೈತರ ಪ್ರಶ್ನೆ ಮಾತ್ರ ಸರಳವಾಗಿದೆ—ದಾಖಲೆಗಳಲ್ಲಿ ಮಳೆ ಕೊರತೆ ಕಡಿಮೆಯಿರಬಹುದು… ಆದರೆ ಹೊಲದಲ್ಲಿ ಒಣಗುತ್ತಿರುವ ಬೆಳೆಯನ್ನು ಯಾವ ದಾಖಲೆ ಅಳೆಯಲಿದೆ?

ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಈಗಾಗಲೇ ಶೇ.೫೦ರಷ್ಟು ಬೆಳೆಹಾನಿ ವರದಿ ಸಲ್ಲಿಕೆಯಾಗಿದೆ. ಒಂದೆಡೆ ಬೆಳೆಹಾನಿಯ ವರದಿ, ಮತ್ತೊಂದೆಡೆ ಬರಪೀಡಿತ ಪಟ್ಟಿಯಿಂದ ಹೊರಗಿಡುವ ಪರಿಸ್ಥಿತಿ—ಇದು ರೈತರಿಗೆ ಅರ್ಥವಾಗದ ಲೆಕ್ಕಾಚಾರವಾಗಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕು ಹೊರತುಪಡಿಸಿ ಲಕ್ಷ್ಮೇಶ್ವರ ಸೇರಿದಂತೆ ಉಳಿದ ತಾಲೂಕುಗಳು ಬರಪಟ್ಟಿಯಿಂದ ಹೊರಗುಳಿದಿವೆ. ಒಂದೇ ಜಿಲ್ಲೆಯೊಳಗೆ ಮಳೆ ಕೊರತೆ, ಬೆಳೆಹಾನಿ ಹಾಗೂ ರೈತರ ಸಂಕಷ್ಟ ಬಹುತೇಕ ಒಂದೇ ರೀತಿಯಲ್ಲಿದ್ದರೂ ಬರ ಘೋಷಣೆಯಲ್ಲಿ ಮಾತ್ರ ಈ ವ್ಯತ್ಯಾಸ ಏಕೆ ಎಂಬ ಪ್ರಶ್ನೆ ರೈತ ಸಮುದಾಯದಿಂದ ಕೇಳಿಬರುತ್ತಿದೆ.

ಮುಖ್ಯಮಂತ್ರಿಗಳ ಬರ ವೀಕ್ಷಣೆ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಕಡತಗಳಲ್ಲಿರುವ ಅಂಕಿ-ಅಂಶಗಳನ್ನು ಮಂಡಿಸುವ ಬದಲು, ಒಣಗುತ್ತಿರುವ ಹೊಲಗಳಿಗೆ ಕರೆದುಕೊಂಡು ಹೋಗಿ ನೈಜ ಸ್ಥಿತಿಯನ್ನು ತೋರಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

ತಾಲೂಕಿನ ಬಟ್ಟೂರ, ಸೂರಣಗಿ, ಬಾಲೆಹೊಸೂರು, ಹರದಗಟ್ಟಿ, ಆದ್ರಳ್ಳಿ, ದೊಡ್ಡೂರು, ಯಲ್ಲಾಪುರ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗಿ ನಿಂತಿವೆ.

ಹೊಲಕ್ಕೆ ಇಳಿದು ನೋಡಿದರೆ ಮಾತ್ರ ರೈತನ ನೋವು ಅರ್ಥವಾಗುತ್ತದೆ. ಕಡತ ತೆರೆದು ನೋಡಿದರೆ ಕೇವಲ ಅಂಕಿ-ಅಂಶಗಳು ಮಾತ್ರ ಕಾಣುತ್ತವೆ. ಹೀಗಾಗಿ ಮುಖ್ಯಮಂತ್ರಿ ಅವರು ಅಧಿಕಾರಿಗಳ ವರದಿಗಿಂತ ಹೊಲದಲ್ಲಿರುವ ವಾಸ್ತವವನ್ನು ನೋಡಬೇಕು ಎಂಬುದು ಅನ್ನದಾತರ ಒಕ್ಕೊರಲಿನ ಆಗ್ರಹವಾಗಿದೆ.

ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ರೈತರಲ್ಲಿ ಭಾರಿ ನಿರೀಕ್ಷೆ ಮೂಡಿದೆ. ಒಣಗುತ್ತಿರುವ ಬೆಳೆಗಳನ್ನು ಖುದ್ದಾಗಿ ವೀಕ್ಷಿಸಿ, ತಾಲೂಕಿನ ಬರಗಾಲದ ವಸ್ತುಸ್ಥಿತಿಯನ್ನು ಅರಿತು ಲಕ್ಷ್ಮೇಶ್ವರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡುವ ನಿರ್ಧಾರ ಕೈಗೊಳ್ಳಲಾಗುತ್ತದೆಯೇ? ಎಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.

ಸಿಎಂ ಭೇಟಿ ಕಾಟಾಚಾರದ ಬರ ವೀಕ್ಷಣೆಯಾಗುತ್ತದೆಯೇ ಅಥವಾ ರೈತರ ಬದುಕಿಗೆ ಆಸರೆಯಾಗುವ ಮಹತ್ವದ ನಿರ್ಧಾರಕ್ಕೆ ನಾಂದಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಚ್ಛಾಶಕ್ತಿಯೊಂದಿಗೆ ಸಮನ್ವಯ ಸಾಧಿಸಿ ಜಿಲ್ಲೆಯ ಬರಗಾಲದ ವಸ್ತುಸ್ಥಿತಿ ಹಾಗೂ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಖುದ್ದಾಗಿ ಪರಿಶೀಲಿಸಬೇಕು. ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಲಕ್ಷ್ಮೇಶ್ವರದ ಹೆಸರನ್ನು ಸೇರ್ಪಡೆ ಮಾಡಿ, ತ್ವರಿತವಾಗಿ ಬೆಳೆನಷ್ಟ ಪರಿಹಾರ, ಬೆಳೆವಿಮೆ ಹಾಗೂ ಇತರ ಬರ ಪರಿಹಾರದ ಸೌಲಭ್ಯಗಳನ್ನು ಕಲ್ಪಿಸಬೇಕು. ಮುಖ್ಯಮಂತ್ರಿ ಅವರ ಬರ ವೀಕ್ಷಣೆ ಕೇವಲ ಅಧಿಕಾರಿಗಳ ಕಡತಗಳ ವೀಕ್ಷಣೆಯಾಗದೆ, ರೈತರ ಹೊಲದಲ್ಲಿನ ಬರದ ವಾಸ್ತವ ಸ್ಥಿತಿಯ ವೀಕ್ಷಣೆಯಾಗಬೇಕು. ಸರ್ಕಾರದ ನಿರ್ಧಾರವೂ ಅದಕ್ಕೆ ತಕ್ಕಂತಿರಬೇಕು. ಕಾಟಾಚಾರಕ್ಕೆ ಬಂದ ಪುಟ್ಟ, ಹೋದ ಪುಟ್ಟ ಎಂಬಂತಾದರೆ ಇಡೀ ರೈತ ಸಮುದಾಯ ಸರ್ಕಾರದ ವಿರುದ್ಧ ತಿರುಗಿಬೀಳಲಿದೆ. ರೈತರ ನ್ಯಾಯಯುತ ಬೇಡಿಕೆಗಳಿಗಾಗಿ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ.

– ಮಂಜುನಾಥ ಮಾಗಡಿ, ಅಧ್ಯಕ್ಷರು, ಸಮಗ್ರ ರೈತ ಸಂಘಟನೆಗಳ ಒಕ್ಕೂಟ

ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕ್ಷೇತ್ರ ಹಾಗೂ ಬೆಳೆಹಾನಿ ಪ್ರಮಾಣದ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಬರ ವೀಕ್ಷಣೆಗೆ ಬರುವ ಸಂದರ್ಭದಲ್ಲಿ ತಾಲೂಕಿನ ಬರಗಾಲದ ವಸ್ತುಸ್ಥಿತಿ, ಬೆಳೆಹಾನಿ ಹಾಗೂ ರೈತರು ಅನುಭವಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯ ಕುರಿತು ಸಮಗ್ರ ಮಾಹಿತಿ ನೀಡಲು ಅಗತ್ಯ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ.

– ಶಿವಕುಮಾರ ಕಾಶಪ್ಪನವರ, ಸಹಾಯಕ ಕೃಷಿ ನಿರ್ದೇಶಕರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img