HomeGadag Newsಸಂಭ್ರಮ–ಸಡಗರದಲ್ಲಿ ಜಕ್ಕಲಿಯ ಕಲ್ಮೇಶ್ವರ ಹುಚ್ಚಯ್ಯ ತೇರು

ಸಂಭ್ರಮ–ಸಡಗರದಲ್ಲಿ ಜಕ್ಕಲಿಯ ಕಲ್ಮೇಶ್ವರ ಹುಚ್ಚಯ್ಯ ತೇರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದ ರಾಧ್ಯ ದೈವ ಕಲ್ಮೇಶ್ವರ ದೇವರ ಹುಚ್ಚಯ್ಯ ತೇರು ಉತ್ಸವ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ಭಕ್ತಿ-ಭಾವ ಮತ್ತು ಸಂಭ್ರಮ-ಸಡಗರದಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಗ್ರಾಮದ ಮಹಿಳೆಯರು ಮನೆಗಳಲ್ಲಿ ತಯಾರಿಸಿದ ವಿಶೇಷ ಸಿಹಿ ಅಡುಗೆಯ ಎಡೆಯನ್ನು ದೇವರಿಗೆ ಅರ್ಪಿಸಿ ಭಕ್ತಿಭಾವ ಮೆರೆದರು. ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನದಾಸೋಹವೂ ಏರ್ಪಡಿಸಲಾಗಿತ್ತು.

ಸಂಜೆ ವೀರಭದ್ರೇಶ್ವರ ದೇವಸ್ಥಾನದಿಂದ ನಂದಿಕೋಲನ್ನು ಮೆರವಣಿಗೆಯಲ್ಲಿ ಕಲ್ಮೇಶ್ವರ ದೇವಸ್ಥಾನಕ್ಕೆ ತರಲಾಯಿತು. ಬಳಿಕ ಶಿವಶರಣರಾದ ಅಣ್ಣಯ್ಯ–ತಮ್ಮಯ್ಯನವರ ಮನೆಯಿಂದ ಕಳಸವನ್ನು ತಂದು ವಿಶೇಷ ಪೂಜೆ ಸಲ್ಲಿಸಿ ಹುಚ್ಚಯ್ಯ ತೇರಿಗೆ ಜೋಡಿಸಲಾಯಿತು. ಶಿವಶರಣರ ಮರಿ ಮೊಮ್ಮಕ್ಕಳು ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ವಿವಿಧ ಬಗೆಯ ಹೂವುಗಳಿಂದ ಅಲಂಕೃತಗೊಂಡ ಭವ್ಯ ತೇರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದಂತೆ ‘ಶ್ರೀ ಕಲ್ಮೇಶ್ವರ ಮಹಾರಾಜ್ ಕೀ ಜೈ’, ‘ಹರ ಹರ ಮಹಾದೇವ’ ಎಂಬ ಭಕ್ತರ ಜಯಘೋಷಗಳು ಮೊಳಗಿದವು. ಉತ್ತತ್ತಿ ಎಸೆದು, ನಮಸ್ಕರಿಸಿ ಭಕ್ತರು ತೇರನ್ನು ಎಳೆದರು.

ದುರ್ಗಾದೇವಿ ಹಾಗೂ ಬೀರದೇವರ ಡೊಳ್ಳು ಮೇಳದ ಡೊಳ್ಳು ಕುಣಿತ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. ಯುವಕರ ತಂಡ ನಂದಿಕೋಲನ್ನು ಒಂದೇ ಕೈಯಲ್ಲಿ ಎತ್ತಿ ಹಿಡಿದು ಪ್ರದರ್ಶಿಸಿದ್ದು ನೆರೆದಿದ್ದವರ ಗಮನ ಸೆಳೆಯಿತು.

ವೀರಭದ್ರೇಶ್ವರ ದೇವಸ್ಥಾನದ ಬಳಿ ಸಾಂಪ್ರದಾಯಿಕ ಒಡಪುಗಳ ಘೋಷ ಮೊಳಗುತ್ತಿದ್ದಂತೆ ಭಕ್ತರು ಭಕ್ತಿಯ ಪರವಶತೆಯಲ್ಲಿ ತೇಲಿದರು. ತಳಿರು-ತೋರಣಗಳು ಹಾಗೂ ದೇವಸ್ಥಾನದ ಗೋಪುರ, ದೀಪಸ್ತಂಭ ಮತ್ತು ನವಗ್ರಹ ಮಂಟಪಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರ ಜಾತ್ರೆಯ ರಾತ್ರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿತು.

ಗ್ರಾಮದ ಪ್ರಮುಖ ದೇವಸ್ಥಾನಗಳು ಹಾಗೂ ಬೀದಿಗಳಲ್ಲಿ ಸಂಚರಿಸಿದ ಹುಚ್ಚಯ್ಯ ಉತ್ಸವವು ಭೋರ್ಗಲ್‌ವರೆಗೆ ತೆರಳಿ ಮರಳಿ ಸ್ವಸ್ಥಾನ ತಲುಪಿದಾಗ ಭಕ್ತರು ಸಂಭ್ರಮಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img