ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ.
ಪ್ರಕರಣದಲ್ಲಿ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿದ್ದು, ಇಂದು ಅವರ ಸಾಕ್ಷಿ ಹೇಳಿಕೆ ದಾಖಲಾಗುತ್ತಾ ಎಂಬ ಕುತೂಹಲ ಮೂಡಿದೆ.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ನ್ಯಾಯಾಲಯ ಸಮ್ಮತಿ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲು ವಿಟ್ನೆಸ್ ಸಮನ್ಸ್ ಜಾರಿಗೊಳಿಸಲಾಗಿತ್ತು. ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಜೈಲಾಧಿಕಾರಿಗಳ ಮೂಲಕ ಸಮನ್ಸ್ ಜಾರಿ ಮಾಡುವಂತೆ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಸೂಚಿಸಿದ್ದರು.
ಇದರ ಬೆನ್ನಲ್ಲೇ ಇಂದು ಪ್ರದೋಷ್ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ಹೇಳಿಕೆ ನೀಡುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದರೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಅದು ಮಹತ್ವದ ಬೆಳವಣಿಗೆಯಾಗಲಿದೆ.
ಇದೇ ವೇಳೆ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಸೆಷನ್ಸ್ ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಆರೋಪಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ದರ್ಶನ್ ಪರ ವಕೀಲರು ಸಲ್ಲಿಸಿರುವ ಅರ್ಜಿ ಹೈಕೋರ್ಟ್‌ನ ಪಟ್ಟಿಯಲ್ಲಿ 49ನೇ ಮ್ಯಾಟರ್ ಆಗಿದೆ. ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅರ್ಜಿಯ ಕುರಿತು ಆದೇಶ ಹೊರಬೀಳುವ ಸಾಧ್ಯತೆಯಿದೆ.
ಹೀಗಾಗಿ ಹೈಕೋರ್ಟ್‌ನ ಆದೇಶದ ಬಳಿಕ ಮಧ್ಯಾಹ್ನ 12ರ ಸುಮಾರಿಗೆ ಪ್ರದೋಷ್ ಅವರ ಹೇಳಿಕೆ ದಾಖಲಿಸಲು ಕೆಳ ನ್ಯಾಯಾಲಯದಲ್ಲಿ ಸಿದ್ಧತೆ ನಡೆಯುತ್ತಿದೆ. ಹೈಕೋರ್ಟ್ ಆದೇಶ ಏನಾಗಲಿದೆ? ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡುತ್ತಾರಾ? ಎಂಬುದರ ಮೇಲೆ ಇದೀಗ ಎಲ್ಲರ ಗಮನ ನೆಟ್ಟಿದೆ.



