ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಆರೋಪದ ಮೇಲೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದ ಒಟ್ಟು 31 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗಡಿಪಾರು ಮಾಡಿದ್ದಾರೆ.
ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ 31 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರ ದಾಖಲೆಗಳು ಹಾಗೂ ಭಾರತದಲ್ಲಿ ವಾಸ್ತವ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಗಡಿಪಾರು ಮಾಡಲಾಗಿದೆ.
ಪೊಲೀಸ್ ಭದ್ರತೆಯೊಂದಿಗೆ 31 ಮಂದಿಯನ್ನು ಬೆಂಗಳೂರಿನ ರೈಲ್ವೆ ಟರ್ಮಿನಲ್ಗೆ ಕರೆದೊಯ್ಯಲಾಯಿತು. ಸುಮಾರು 20 ಪೊಲೀಸ್ ಸಿಬ್ಬಂದಿಯ ಭದ್ರತೆಯಲ್ಲಿ ಅವರನ್ನು ರೈಲಿನ ಮೂಲಕ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ದ ಪೊಲೀಸರು, ಅಲ್ಲಿಂದ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ಕುರಿತು ಪೊಲೀಸರು ನಡೆಸಿದ ಪರಿಶೀಲನೆ ಹಾಗೂ ಕಾರ್ಯಾಚರಣೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಬಂಧಿತ 31 ಮಂದಿಯ ದಾಖಲೆಗಳು, ಭಾರತದಲ್ಲಿ ವಾಸ್ತವ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಅವರ ಹಿನ್ನೆಲೆಯನ್ನು ಪರಿಶೀಲಿಸಿದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಗಡಿಪಾರು ಮಾಡಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ.



