HomeEntertainmentಸುದೀಪ್‌ಗೆ ಬರ್ತಡೇಗೆ ಮತ್ತೊಂದು ಬಿಗ್‌ ಸರ್ಪ್ರೈಸ್: ‘ದೇವರಾಯ’ ಚಿತ್ರದಲ್ಲಿ ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ

ಸುದೀಪ್‌ಗೆ ಬರ್ತಡೇಗೆ ಮತ್ತೊಂದು ಬಿಗ್‌ ಸರ್ಪ್ರೈಸ್: ‘ದೇವರಾಯ’ ಚಿತ್ರದಲ್ಲಿ ಶ್ರೀ ಕೃಷ್ಣದೇವರಾಯನಾಗಿ ಕಿಚ್ಚ

For Dai;y Updates Join Our whatsapp Group

ಬೆಂಗಳೂರು: ಕಿಚ್ಚ ಸುದೀಪ್ ಅವರ 53ನೇ ಹುಟ್ಟುಹಬ್ಬ ಕನ್ನಡ ಚಿತ್ರರಂಗಕ್ಕೆ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಘೋಷಣೆಗಳನ್ನು ನೀಡುತ್ತಿದೆ. ‘ಬಿಲ್ಲಾ ರಂಗ ಭಾಷಾ’ ಬಳಿಕ ಇದೀಗ ಸುದೀಪ್ ಮತ್ತೊಂದು ಬೃಹತ್ ಪ್ರಾಜೆಕ್ಟ್ ಘೋಷಿಸಿದ್ದು, ಈ ಬಾರಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ದೇವರಾಯ’ ಎಂಬ ಶೀರ್ಷಿಕೆ ಅಂತಿಮಗೊಂಡಿದೆ.

ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಕಾನ್ಸೆಪ್ಟ್ ವೀಡಿಯೋ ಸಿನಿಮಾದ ಪ್ರಮಾಣದ ಬಗ್ಗೆ ಸುಳಿವು ನೀಡಿದೆ. ವಿಜಯನಗರ ಸಾಮ್ರಾಜ್ಯದ ಭವ್ಯತೆ, ಗಗನಚುಂಬಿ ದೇವಸ್ಥಾನಗಳ ಗೋಪುರಗಳು, ಆನೆ ಪಡೆಗಳು, ಯುದ್ಧದ ಸನ್ನಿವೇಶಗಳು ಹಾಗೂ ರಾಜನ ಗಾಂಭೀರ್ಯವನ್ನು ಬಿಂಬಿಸುವ ದೃಶ್ಯಗಳ ನಡುವೆ ಸುದೀಪ್ ಅವರ ಕೃಷ್ಣದೇವರಾಯನ ಲುಕ್ ಅನಾವರಣಗೊಂಡಿದೆ.

ಸುದೀಪ್ ಈ ಪಾತ್ರವನ್ನು ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಐತಿಹಾಸಿಕ ರಾಜನ ಪರಂಪರೆಯನ್ನು ಹಂಚಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ. ಬಿಡುಗಡೆಯಾಗಿರುವ ಕಾನ್ಸೆಪ್ಟ್ ವೀಡಿಯೋ ಸಂಪೂರ್ಣವಾಗಿ ಎಐ ತಂತ್ರಜ್ಞಾನದಲ್ಲಿ ಸಿದ್ಧಪಡಿಸಲಾಗಿದೆ.

ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಭಾವಶಾಲಿ ದೊರೆಗಳಲ್ಲಿ ಒಬ್ಬರು. ಯುದ್ಧ ಕೌಶಲ, ಸಮರ್ಥ ಆಡಳಿತ ಮತ್ತು ಸಾಹಿತ್ಯದ ಮೇಲಿನ ಆಸಕ್ತಿಗೆ ಹೆಸರುವಾಸಿಯಾಗಿದ್ದ ಅವರ ಜೀವನವನ್ನು ಆಧರಿಸಿ ಸಿನಿಮಾ ರೂಪಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ‘ದೇವರಾಯ’ ಆ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಚಿತ್ರವಾಗಿ ಮೂಡಿಬರುವ ನಿರೀಕ್ಷೆ ಮೂಡಿಸಿದೆ.

ಈ ಹಿಂದೆ ಡಾ. ರಾಜ್‌ಕುಮಾರ್ ಅವರು ಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ದಶಕಗಳ ಬಳಿಕ ಅದೇ ಐತಿಹಾಸಿಕ ಪಾತ್ರವನ್ನು ಸುದೀಪ್ ನಿರ್ವಹಿಸಲಿದ್ದು, ಈ ಸಿನಿಮಾ ಅವರ ವೃತ್ತಿಬದುಕಿನಲ್ಲೇ ಪ್ರಮುಖ ಮೈಲಿಗಲ್ಲಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಪ್ರಿಯಾ ಸುದೀಪ್ ಅವರ ಅರ್ಪಣೆಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಹಣ ಹೂಡುತ್ತಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ‘ದೇವರಾಯ’ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ.

ಚಿತ್ರದ ನಿರ್ದೇಶಕರ ಹೆಸರನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಐತಿಹಾಸಿಕ ಕಥೆಗೆ ಅಗತ್ಯವಿರುವ ಭವ್ಯ ಸೆಟ್‌ಗಳು ಮತ್ತು ವಿಎಫ್‌ಎಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ 2027ರ ಡಿಸೆಂಬರ್‌ನಲ್ಲಿ ‘ದೇವರಾಯ’ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img