ವಿಜಯಸಾಕ್ಷಿ ಸುದ್ದಿ, ಗದಗ: ಗದಗ ತಾಲೂಕು ದಂಡಾಧಿಕಾರಿಗಳ (ತಹಸೀಲ್ದಾರ್) ಕಚೇರಿ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆಯಲ್ಲಿ, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಜಿಲ್ಲಾಧಿಕಾರಿ ಕಚೇರಿ ಎದುರಿನ ನಿಸರ್ಗ ಬಡಾವಣೆಯಲ್ಲಿರುವ ಜಿಲ್ಲಾ ಸಾಹಿತ್ಯ ಭವನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಾಂತಯ್ಯ ಮುತ್ತಿನಪೆಂಡಿಮಠ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೃದಯಭಾಗದಲ್ಲಿರುವ ಗದಗ ತಾಲೂಕು ತಹಸೀಲ್ದಾರ್ ಕಚೇರಿಯನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ರೈತರು ಹಾಗೂ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತೆರಳಲು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಗದಗ ನಗರದಲ್ಲಿ ಸಮರ್ಪಕ ನಗರ ಸಾರಿಗೆ ವ್ಯವಸ್ಥೆ ಇಲ್ಲ. ಇಂತಹ ಸಂದರ್ಭದಲ್ಲಿ ಕಚೇರಿಯನ್ನು ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಸಾರ್ವಜನಿಕರು ಖಾಸಗಿ ಆಟೊಗಳನ್ನು ಅವಲಂಬಿಸಬೇಕಾಗುತ್ತದೆ. ಇದರಿಂದ ಪ್ರಯಾಣ ವೆಚ್ಚ ಹಾಗೂ ಸಮಯ ಎರಡೂ ಹೆಚ್ಚಲಿದ್ದು, ಗ್ರಾಮೀಣ ಭಾಗದಿಂದ ಬರುವ ರೈತರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ಹೇಳಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿಯೇ ಸಾಕಷ್ಟು ಸರ್ಕಾರಿ ಕಟ್ಟಡಗಳು ಲಭ್ಯವಿದ್ದರೂ ತಹಶೀಲ್ದಾರ್ ಕಚೇರಿಯನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಈ ನಿರ್ಧಾರದಿಂದ ಅಧಿಕಾರಿಗಳ ಸ್ವಹಿತಾಸಕ್ತಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದ ಅವರು, ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಸ್ಥಳಾಂತರದ ನಿರ್ಧಾರವನ್ನು ಹಿಂಪಡೆದು, ಜನರಿಗೆ ಸುಲಭವಾಗಿ ತಲುಪಬಹುದಾದ ಸ್ಥಳದಲ್ಲಿಯೇ ತಾತ್ಕಾಲಿಕ ಕಚೇರಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಪ್ರಭು ಜುಟ್ಟದ, ದಾವಲಸಾಬ ನಾಗನೂರ, ಶಿವಯೋಗಯ್ಯ ಶಶಿಮಠ, ಅಜಾಜ್ ಧಾ ಹಾಗೂ ವೆಂಕಟೇಶ ಜುಂಜಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಹಸೀಲ್ದಾರ್ ಕಚೇರಿ ಜನಸಾಮಾನ್ಯರಿಗೆ ಸುಲಭವಾಗಿ ತಲುಪುವ ಸ್ಥಳದಲ್ಲಿರಬೇಕು. ನಗರ ಸಾರಿಗೆ ವ್ಯವಸ್ಥೆಯೇ ಸಮರ್ಪಕವಾಗಿಲ್ಲದ ಸಂದರ್ಭದಲ್ಲಿ ದೂರದ ಪ್ರದೇಶಕ್ಕೆ ಕಚೇರಿ ಸ್ಥಳಾಂತರಿಸುವುದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಮತ್ತು ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ. ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕು.
– ಶಾಂತಯ್ಯ ಮುತ್ತಿನಪೆಂಡಿಮಠ, ರಾಜ್ಯ ಗೌರವಾಧ್ಯಕ್ಷರು, ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘ



