ಬೆಂಗಳೂರು: ಬೆಳ್ಳಂಬೆಳಗ್ಗೆ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಯುವಕನೊಬ್ಬ ಸ್ಥಳೀಯರಿಗೆ ಸಿಕ್ಕಿಬಿದ್ದಿರುವ ಘಟನೆ ನಗರದ ಹೆಚ್‌ಎಸ್‌ಆರ್ ಬಡಾವಣೆಯ ಅರಗ ಕೆರೆ ಬಳಿ ನಡೆದಿದೆ.
ಸರ್ಜಾಪುರದಲ್ಲಿ ವಾಸವಿರುವ ಗೋಲ್ಡನ್ ಕುಮಾರ್ ಎಂಬಾತ ಮಹಿಳೆಯರ ವಿಡಿಯೋಗಳನ್ನು ಕದ್ದುಮುಚ್ಚಿ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಜಾಗಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರ ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ತನ್ನ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳೀಯರು ಯುವಕನ ಮೊಬೈಲ್ ಪರಿಶೀಲಿಸಿದಾಗ ಹಲವು ಮಹಿಳೆಯರ ವಿಡಿಯೋಗಳು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



