ನವದೆಹಲಿ: ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರು ನಡೆದುಹೋಗಲು ಮಾತ್ರ ನಿರ್ಮಿಸಲಾಗಿದ್ದು, ಅವುಗಳನ್ನು ಯಾವುದೇ ರೀತಿಯಲ್ಲಿ ಅತಿಕ್ರಮಿಸಲು ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದೆಹಲಿಯ ಬಸ್ತಿ ನಿವಾಸಿಗಳ ಗುಂಪಾದ ಲೋಹರ್ ಬಸ್ತಿ ಲಾಲ್ ಬಾಗ್ ಆಜಾದ್ಪುರ್ ವಿಕಾಸ್ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠ ಇತ್ತೀಚೆಗೆ ನಡೆಸಿತ್ತು. ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ಕೆಲವು ಜೋಪಡಿಗಳ ತೆರವು ಕಾರ್ಯಾಚರಣೆಗೆ ತಡೆ ನೀಡಲು ನಿರಾಕರಿಸಿದ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿತು.
ಜೋಪಡಿಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಡೆಮಾಲಿಷನ್ ನೋಟಿಸ್ ಪ್ರಶ್ನಿಸಿ ವಿಕಾಸ್ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಅರ್ಜಿದಾರರೇ ಪಾದಚಾರಿ ಮಾರ್ಗದ ಮೇಲೆ ಬಸ್ತಿಗಳನ್ನು ನಿರ್ಮಿಸಿರುವುದನ್ನು ಗಮನಿಸಿದ ಕೋರ್ಟ್, ತಕ್ಷಣದ ಪರಿಹಾರ ನೀಡಲು ನಿರಾಕರಿಸಿತಲ್ಲದೆ, ಪಾದಚಾರಿ ಮಾರ್ಗ ಪಾದಚಾರಿಗಳಿಗಷ್ಟೇ ಸೀಮಿತ ಎಂದು ಸ್ಪಷ್ಟಪಡಿಸಿತು.
ಪಾದಚಾರಿ ಮಾರ್ಗಗಳನ್ನು ವಾಹನ ಸಂಚಾರದಿಂದ ದೂರವಾಗಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗುತ್ತದೆಯೇ ಹೊರತು ಅತಿಕ್ರಮಿಸಲು ಅಲ್ಲ ಎಂದು ಹೇಳಿದ ಕೋರ್ಟ್, ಈ ಕಾರಣಗಳಿಂದ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿತು.
ಆಗಸ್ಟ್ 7ರಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹೊರಡಿಸಿದ್ದ ತೆರವು ನೋಟಿಸ್ ರದ್ದುಪಡಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಜೋಪಡಿ ನಿವಾಸಿಗಳು ಸರ್ಕಾರಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಜೋಪಡಿಗಳನ್ನು ನಿರ್ಮಿಸಿದ್ದಲ್ಲದೆ, ವಿವಿಧ ವ್ಯಾಪಾರ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿತ್ತು.
ಅದೇ ವೇಳೆ, ಬಸ್ತಿಯ ನಿವಾಸಿಗಳ ಸಮೀಕ್ಷೆ ನಡೆಸಿ, ಪುನರ್ವಸತಿಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸುವಂತೆ ಹಾಗೂ ಆ ಕ್ರಮಗಳನ್ನು ಕೈಗೊಳ್ಳುವವರೆಗೆ ತೆರವು ನೋಟಿಸ್ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅರ್ಜಿದಾರರು ಮಧ್ಯಂತರ ನಿರ್ದೇಶನ ಕೋರಿದ್ದರು. ಆದರೆ ತೆರವು ನೋಟಿಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು. ಆದಾಗ್ಯೂ, ಪುನರ್ವಸತಿ ಕುರಿತ ಅರ್ಜಿದಾರರ ಮನವಿಯನ್ನು 4 ವಾರಗಳೊಳಗೆ ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿತು. ಇದರ ಹೊರತಾಗಿ ಯಾವುದೇ ಪರಿಹಾರ ಅಥವಾ ಇತರೆ ಆದೇಶ ಪಡೆಯಲು ಅರ್ಜಿದಾರರು ಅರ್ಹರಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.



