ನವದೆಹಲಿ: ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ವೇಳೆ ಮಿಗ್-21 ಸಮೇತ ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ಪಾಕಿಸ್ತಾನ ವಾಯುಪಡೆಯ ವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಇದೀಗ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈ91ಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ.
ಸದ್ಯ ಅವರು ಗೋವಾ ಮತ್ತು ಹೈದರಾಬಾದ್ ಮಾರ್ಗದಲ್ಲಿ ಎಟಿಆರ್ ವಿಮಾನ ಸಂಚರಿಸುವ ಕುರಿತು ತರಬೇತಿಯಲ್ಲಿ ನಿರತರಾಗಿದ್ದು, ತರಬೇತಿ ಪೂರ್ಣಗೊಂಡ ಬಳಿಕ ವಿಮಾನ ಸಂಚಾರ ನಡೆಸಲಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಅಭಿನಂದನ್ ಅವರು 2026ರ ಆಗಸ್ಟ್ನಲ್ಲಿ ಫ್ಲೈ91 ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ.
ಅಭಿನಂದನ್ ವರ್ಧಮಾನ್ ಅವರು 2019ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ಸಂಘರ್ಷದ ಬಳಿಕ ದೇಶಾದ್ಯಂತ ಅತ್ಯಂತ ಪರಿಚಿತ ಮುಖವಾಗಿ ಗುರುತಿಸಿಕೊಂಡಿದ್ದರು. ಅಭಿನಂದನ್ ಭಾಗವಹಿಸಿದ್ದ ಈ ವೈಮಾನಿಕ ಕಾಳಗ, ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್ನಲ್ಲಿ ಭಯೋತ್ಪಾದಕ ಗುರಿಗಳ ಮೇಲೆ ವಾಯುದಾಳಿ ನಡೆಸಿದ ಒಂದು ದಿನದ ಬಳಿಕ ನಡೆದಿತ್ತು. 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಬಾಲಾಕೋಟ್ನಲ್ಲಿ ವಾಯುದಾಳಿ ನಡೆಸಿತ್ತು.
2019ರ ಫೆಬ್ರವರಿ 27ರಂದು ಪಾಕಿಸ್ತಾನದ ವಿಮಾನಗಳೊಂದಿಗೆ ನಡೆದ ವೈಮಾನಿಕ ಕಾಳಗದಲ್ಲಿ ಮಿಗ್-21 ಬೈಸನ್ ಯುದ್ಧವಿಮಾನ ಹಾರಿಸುತ್ತಿದ್ದ ಅಭಿನಂದನ್, ಪಾಕಿಸ್ತಾನದ ಒಂದು ಯುದ್ಧವಿಮಾನ ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನಕ್ಕೂ ಕ್ಷಿಪಣಿ ಅಪ್ಪಳಿಸಿ ಹಾನಿಗೊಳಗಾಗಿದ್ದರಿಂದ ಅಭಿನಂದನ್ ಪ್ಯಾರಾಶೂಟ್ ಮೂಲಕ ಹೊರಗೆ ಜಿಗಿಯಬೇಕಾಯಿತು. ಬಳಿಕ ಪಾಕಿಸ್ತಾನದ ಭೂಪ್ರದೇಶದಲ್ಲಿ ಇಳಿದ ಅವರು ಅಲ್ಲಿನ ಸೇನೆಯ ವಶಕ್ಕೆ ಸಿಲುಕಿದ್ದರು. ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು 2019ರ ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.
2019ರ ವೈಮಾನಿಕ ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯ ಮತ್ತು ಕರ್ತವ್ಯಪ್ರಜ್ಞೆಗಾಗಿ ಅಭಿನಂದನ್ ವರ್ಧಮಾನ್ ಅವರಿಗೆ 2021ರಲ್ಲಿ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗೋವಾ ಮೂಲದ ಫ್ಲೈ91 ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿದ್ದು, 2024ರ ಮಾರ್ಚ್ನಲ್ಲಿ ವಾಣಿಜ್ಯ ವಿಮಾನಯಾನ ಸೇವೆ ಆರಂಭಿಸಿತು. ಸಂಸ್ಥೆ ಪ್ರಸ್ತುತ ಆರು ಎಟಿಆರ್ 72-600 ವಿಮಾನಗಳನ್ನು ಹೊಂದಿದ್ದು, ಗೋವಾ ಮತ್ತು ಹೈದರಾಬಾದ್ನಲ್ಲಿ ಕಾರ್ಯಾಚರಣಾ ನೆಲೆಗಳನ್ನು ಹೊಂದಿದೆ. ಸಣ್ಣ ನಗರಗಳನ್ನು ಪ್ರಮುಖ ವಿಮಾನಯಾನ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ಪ್ರಾದೇಶಿಕ ವಾಯುಸಂಪರ್ಕ ಹೆಚ್ಚಿಸುವುದೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.



