HomeKarnataka Newsಗ್ರಾಚ್ಯುಟಿ ಹಣದಿಂದ ಬಾಕಿ ಕಡಿತ ಸಲ್ಲದು: ಕೆಎಸ್‌ಆರ್‌ಟಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಗ್ರಾಚ್ಯುಟಿ ಹಣದಿಂದ ಬಾಕಿ ಕಡಿತ ಸಲ್ಲದು: ಕೆಎಸ್‌ಆರ್‌ಟಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಾದ ಬಾಕಿ, ಬಡ್ಡಿ ಸೇರಿದಂತೆ ಯಾವುದೇ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮಂಡ್ಯ ವಿಭಾಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6)ರ ಪ್ರಕಾರ, ಸಂಸ್ಥೆಗೆ ನೌಕರನಿಂದ ತೀವ್ರ ಆರ್ಥಿಕ ನಷ್ಟವಾಗಿದ್ದರೆ ಅಥವಾ ನೌಕರ ಸಮಾಜಘಾತುಕ ನಡವಳಿಕೆಯಿಂದ ವಜಾಗೊಂಡಿದ್ದರೆ ಮಾತ್ರ ಗ್ರಾಚ್ಯುಟಿ ತಡೆಯಲು ಅವಕಾಶವಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಸಂಸ್ಥೆ ಹೊರಡಿಸುವ ಆಂತರಿಕ ಸುತ್ತೋಲೆಗಳು ಮೂಲ ಕಾಯ್ದೆಯ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ ಎಂದು ಹೇಳಿರುವ ಪೀಠ, ಮರುಸೇರ್ಪಡೆಯಾದ ನೌಕರನಿಂದ ಬಡ್ಡಿ ವಸೂಲಿ ಮಾಡುವ ಸಂಸ್ಥೆಯ 2007ರ ಸುತ್ತೋಲೆ ಕಾನೂನುಬದ್ಧವಾಗಿದ್ದರೂ, ಆ ಬಡ್ಡಿ ಬಾಕಿಯನ್ನು ಶಾಸನಬದ್ಧವಾಗಿ ರಕ್ಷಿಸಲ್ಪಟ್ಟಿರುವ ಗ್ರಾಚ್ಯುಟಿ ಹಣದಿಂದ ಕಡಿತಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಸ್ಥೆಗೆ ನೌಕರನಿಂದ ಯಾವುದೇ ಬಡ್ಡಿ ಅಥವಾ ಬಾಕಿ ಬರಬೇಕಿದ್ದರೆ, ಅದನ್ನು ಗ್ರಾಚ್ಯುಟಿ ಹೊರತುಪಡಿಸಿ ನೌಕರನಿಗೆ ಸಿಗಬೇಕಾದ ಇತರ ಸೌಲಭ್ಯಗಳಿಂದ ಅಥವಾ ಕಾನೂನುಬದ್ಧ ಇತರ ಮಾರ್ಗಗಳ ಮೂಲಕ ವಸೂಲಿ ಮಾಡಬಹುದೇ ಹೊರತು ಗ್ರಾಚ್ಯುಟಿ ಹಣ ಕಡಿತಗೊಳಿಸುವಂತಿಲ್ಲ ಎಂದು ತಿಳಿಸಿರುವ ಪೀಠ, ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಕಾರ್ಮಿಕ ಇಲಾಖೆಯ ನಿಯಂತ್ರಣ ಪ್ರಾಧಿಕಾರ ನೀಡಿದ್ದ 1,00,248 ರೂಪಾಯಿ ಗ್ರಾಚ್ಯುಟಿ ಬಾಕಿ ಮತ್ತು ಬಡ್ಡಿ ಪಾವತಿ ಆದೇಶವನ್ನು ಪೀಠ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರಾಚಾರಿ ಅವರನ್ನು 1997ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಸ್ಥೆ 46,910 ರೂಪಾಯಿ ಗ್ರಾಚ್ಯುಟಿ ಪಾವತಿಸಿತ್ತು.

ಬಳಿಕ ವಜಾ ಆದೇಶವನ್ನು ಚಂದ್ರಶೇಖರಾಚಾರಿ ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಪ್ರಾಧಿಕಾರ ಮತ್ತೆ ಸೇವೆಗೆ ನಿಯೋಜಿಸಿಕೊಳ್ಳುವಂತೆ ಸೂಚಿಸಿತ್ತು. ಪರಿಣಾಮ 2000ನೇ ಇಸವಿಯಲ್ಲಿ ಅವರು ಮರಳಿ ಸೇವೆಗೆ ಸೇರಿಕೊಂಡಿದ್ದರು. ಸಂಸ್ಥೆಯ ನಿಯಮಾವಳಿ ಹಾಗೂ 2007ರ ಸುತ್ತೋಲೆಯಂತೆ, ಮರುಸೇರ್ಪಡೆಯಾದಾಗ ಮೊದಲು ಪಡೆದ ಗ್ರಾಚ್ಯುಟಿ ಮೊತ್ತವನ್ನು ಶೇ. 11ರಷ್ಟು ಬಡ್ಡಿಯೊಂದಿಗೆ ಸಂಸ್ಥೆಗೆ ಮರುಪಾವತಿಸಬೇಕಿತ್ತು. ಆದರೆ ನೌಕರ ಈ ಮೊತ್ತವನ್ನು ಪಾವತಿಸದೆ 2008ರಲ್ಲಿ ವಯೋನಿವೃತ್ತಿ ಹೊಂದಿದ್ದರು. ಸಂಸ್ಥೆ ನಿವೃತ್ತಿ ಬಳಿಕ ಪಾವತಿಸಬೇಕಿದ್ದ ಒಟ್ಟು ಗ್ರಾಚ್ಯುಟಿ ಮೊತ್ತದಿಂದ ನೌಕರ ಪಾವತಿಸಬೇಕಿದ್ದ 43,048 ರೂಪಾಯಿ ಬಡ್ಡಿ ಹಣವನ್ನು ಕಡಿತಗೊಳಿಸಿತ್ತು.

ಇದನ್ನು ಪ್ರಶ್ನಿಸಿ ನೌಕರ ಗ್ರಾಚ್ಯುಟಿ ಪಾವತಿ ಕಾಯ್ದೆಯ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಎರಡೂ ಪ್ರಾಧಿಕಾರಗಳು ಕಡಿತಗೊಳಿಸಿದ ಹಣವನ್ನು ಶೇ. 10ರಷ್ಟು ಬಡ್ಡಿಯೊಂದಿಗೆ ನೌಕರನಿಗೆ ಪಾವತಿಸುವಂತೆ ಕೆಎಸ್‌ಆರ್‌ಟಿಸಿಗೆ ಆದೇಶಿಸಿದ್ದವು. ಈ ಆದೇಶವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img