ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ಚಿಕನ್ ಅಂಗಡಿಗಳ ಬಂದ್‌ಗೆ ಕರೆ ನೀಡಲಾಗಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್) ಚಿಕನ್ ಅಂಗಡಿಗಳ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆ.ಜಿ.ಗೆ 5 ರೂಪಾಯಿ ಶುಲ್ಕ ನಿಗದಿಪಡಿಸಿರುವುದನ್ನು ವಿರೋಧಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಪ್ರತಿಭಟನೆ ನಡೆಸುತ್ತಿದೆ.
ಇಂದು (ಸೆಪ್ಟೆಂಬರ್ 3) ಬೆಳಗ್ಗೆ 11 ಗಂಟೆಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕನ್ ಅಂಗಡಿಗಳು ಇಂದು ಬಂದ್ ಆಚರಿಸುತ್ತಿವೆ. ಸೆಪ್ಟೆಂಬರ್ 4ರಂದು ನಗರದಾದ್ಯಂತ ಚಿಕನ್ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸಂಘಟನೆ ನಿರ್ಧರಿಸಿದೆ.
ಬಿಎಸ್‌ಡಬ್ಲ್ಯುಎಂಎಲ್ ನಿಗದಿಪಡಿಸಿರುವ ತ್ಯಾಜ್ಯ ವಿಲೇವಾರಿ ಶುಲ್ಕದಿಂದ ಬೆಂಗಳೂರಿನ ಸುಮಾರು 6ರಿಂದ 7 ಸಾವಿರ ಚಿಕನ್ ಅಂಗಡಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ತಿಳಿಸಿದೆ. ಈ ಶುಲ್ಕವನ್ನು ಹಿಂಪಡೆಯಬೇಕು ಎಂಬುದೇ ಅಂಗಡಿ ಮಾಲೀಕರ ಪ್ರಮುಖ ಬೇಡಿಕೆಯಾಗಿದೆ.
ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 7 ಲಕ್ಷ ಕೆ.ಜಿ. ಚಿಕನ್ ಮಾರಾಟವಾಗುತ್ತಿದ್ದು, ಇದರಿಂದ ಪ್ರತಿದಿನ ಸುಮಾರು 2ರಿಂದ 3 ಲಕ್ಷ ಕೆ.ಜಿ. ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ. ಒಂದು ಚಿಕನ್ ಅಂಗಡಿಯಿಂದ ದಿನಕ್ಕೆ ಸರಾಸರಿ 30 ಕೆ.ಜಿ. ತ್ಯಾಜ್ಯ ಹೊರಬರುತ್ತಿದ್ದು, ಬಿಎಸ್‌ಡಬ್ಲ್ಯುಎಂಎಲ್ ನಿಗದಿಪಡಿಸಿರುವ ಪ್ರತಿ ಕೆ.ಜಿ.ಗೆ 5 ರೂಪಾಯಿ ಶುಲ್ಕದಂತೆ, ಒಂದು ಅಂಗಡಿ ದಿನಕ್ಕೆ ಸುಮಾರು 150 ರೂಪಾಯಿ ಹಾಗೂ ತಿಂಗಳಿಗೆ ಸುಮಾರು 4,500 ರೂಪಾಯಿ ಪಾವತಿಸಬೇಕಾಗುತ್ತದೆ.
ಈ ಶುಲ್ಕದ ಹೊರೆ ಸಣ್ಣ ವ್ಯಾಪಾರಿಗಳ ಮೇಲೆ ಬೀಳಲಿದೆ ಎಂದು ಆಕ್ಷೇಪಿಸಿರುವ ಸಂಘಟನೆ, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಎಸ್‌ಡಬ್ಲ್ಯುಎಂಎಲ್‌ಗೆ ಒತ್ತಾಯಿಸಿದೆ. ಇಂದು ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳ ಬಂದ್ ಜೊತೆಗೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ನಾಳೆಯೂ ನಗರದಾದ್ಯಂತ ಬಂದ್ ಮುಂದುವರಿಯಲಿದೆ. ಇದರಿಂದ ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಚಿಕನ್ ಮಾರಾಟ ಹಾಗೂ ಗ್ರಾಹಕರಿಗೆ ಲಭ್ಯತೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.



