ಚಿಕ್ಕಬಳ್ಳಾಪುರ: ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಮಕ್ಕಳ ಕನಸು ನನಸಾಗಿದ್ದು, ಸರ್ಕಾರಿ ಶಾಲೆ ಹಾಗೂ ಅನಾಥಾಶ್ರಮದ 200ಕ್ಕೂ ಹೆಚ್ಚು ಮಕ್ಕಳು ಮುಂಬೈ ಪ್ರವಾಸಕ್ಕೆ ತೆರಳಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರಯಾಣಿಸಿರುವ ಮಕ್ಕಳು, ಮೊದಲ ವಿಮಾನಯಾನದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ದೇವನಹಳ್ಳಿ ತಾಲೂಕಿನ ಮಲ್ಲೇಪುರ ಸರ್ಕಾರಿ ಶಾಲೆಯ ಮಕ್ಕಳು ಸೇರಿದಂತೆ ವಿವಿಧ ಸರ್ಕಾರಿ ಶಾಲೆಗಳು ಹಾಗೂ ಅನಾಥಾಶ್ರಮದ ಮಕ್ಕಳು, ಪೋಷಕರು ಮತ್ತು ಶಿಕ್ಷಕರು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ. ಎರಡು ದಿನಗಳ ಕಾಲ ಮುಂಬೈನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲಿರುವ ಮಕ್ಕಳು, ಹಲವು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಪ್ರವಾಸದ ಪ್ರಮುಖ ಉದ್ದೇಶ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದಾಗಿದೆ. ಮಕ್ಕಳು ಅಂಬೇಡ್ಕರ್ ಅವರ ಚೈತ್ಯಭೂಮಿ, ನಿವಾಸ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅವರ ಜೀವನ, ಸಾಧನೆ ಹಾಗೂ ಚರಿತ್ರೆಯ ಕುರಿತು ತಿಳಿದುಕೊಳ್ಳಲಿದ್ದಾರೆ.
ದೇವನಹಳ್ಳಿ ಭಾಗದ ಸಮಾಜ ಸೇವಕ ಎಂ.ಪಿ. ಗಿರೀಶ್ ಅವರ ನೇತೃತ್ವದಲ್ಲಿ ಈ ವಿಶೇಷ ಪ್ರವಾಸ ಆಯೋಜಿಸಲಾಗಿದೆ. ಸಾಮಾನ್ಯವಾಗಿ ಪ್ರವಾಸಕ್ಕೆ ಅವಕಾಶ ಸಿಗದ ಮಕ್ಕಳಿಗೂ ಹೊಸ ಅನುಭವ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ.
ಮಕ್ಕಳಿಗೆ ಪ್ರವಾಸ ಕೇವಲ ಮನರಂಜನೆಗೆ ಸೀಮಿತವಾಗದೆ, ಶಿಕ್ಷಣ ಹಾಗೂ ಪ್ರೇರಣೆಯ ಅನುಭವವಾಗಲಿದೆ. ಮೊದಲ ಬಾರಿಗೆ ವಿಮಾನ ಹತ್ತಿದ ಮಕ್ಕಳು ತಮ್ಮ ಸಂತಸವನ್ನು ಹಂಚಿಕೊಂಡಿದ್ದು, ಮುಂಬೈ ಪ್ರವಾಸವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಪ್ರವಾಸ ಆಯೋಜಕ ಗಿರೀಶ್ ತಿಳಿಸಿದ್ದಾರೆ.



