ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಾನವ ಜೀವನ ಅತ್ಯಮೂಲ್ಯವಾದದ್ದು. ಯಾವುದೇ ಕಾರಣಕ್ಕೂ ಅದನ್ನು ಹಾಳು ಮಾಡಿಕೊಳ್ಳದೆ, ಆತ್ಮಹತ್ಯೆಯಂತಹ ದುರಾಲೋಚನೆಗಳಿಂದ ದೂರವಿದ್ದು ಬದುಕನ್ನು ಆಯ್ದುಕೊಳ್ಳಬೇಕು ಎಂದು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಹೇಳಿದರು.
ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದ ಶ್ರೀ ಗುರು ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗ, ಗದಗ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ರೋಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶ್ರೀ ಗುರು ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯ, ಸೂಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ದಾಸವರೇಣ್ಯರು ಮಾನವ ಜನ್ಮ ಅತ್ಯಮೂಲ್ಯವಾದದ್ದು ಎಂಬುದನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ. ಆದರೆ ಜಾಗತೀಕರಣದ ಪರಿಣಾಮವಾಗಿ ಮನುಷ್ಯನ ಜೀವನದಲ್ಲಿ ವಿವಿಧ ರೀತಿಯ ಒತ್ತಡಗಳು ಹೆಚ್ಚಾಗುತ್ತಿವೆ. ಮಾನಸಿಕ ಅಸ್ವಸ್ಥತೆ, ಮಾದಕ ವಸ್ತುಗಳ ವ್ಯಸನ, ಆಪ್ತರ ಸಾವು, ಭೀಕರ ದುರಂತಗಳು, ನೈಸರ್ಗಿಕ ವಿಕೋಪಗಳು, ಅತಿಯಾದ ಸಾಲದ ಬಾಧೆ, ನಿರುದ್ಯೋಗ ಹಾಗೂ ದೀರ್ಘಕಾಲದ ಅನಾರೋಗ್ಯದಂತಹ ಸಮಸ್ಯೆಗಳು ಕೆಲವೊಮ್ಮೆ ಆತ್ಮಹತ್ಯೆಯಂತಹ ಗಂಭೀರ ನಿರ್ಧಾರಗಳಿಗೆ ಕಾರಣವಾಗುತ್ತಿವೆ ಎಂದರು.
ಆದ್ದರಿಂದ ಸಾರ್ವಜನಿಕರು ‘ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು’ ಎಂಬ ನಾಣ್ಣುಡಿಯಂತೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಅವುಗಳನ್ನು ಎದುರಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿ, ಜಗತ್ತಿನಲ್ಲಿ ಸಂಭವಿಸುವ ಆತ್ಮಹತ್ಯೆಯಂತಹ ಗಂಭೀರ ಸ್ವರೂಪದ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಖಿನ್ನತೆ ಸೇರಿದಂತೆ ಗಂಭೀರ ಸಮಸ್ಯೆಗಳಿಗೆ ಸಿಲುಕಿದಾಗ ನೆರವಿನ ಹಸ್ತ ಚಾಚುವುದರ ಜೊತೆಗೆ ಆಪ್ತ ಸಮಾಲೋಚನೆ ಪಡೆಯಬೇಕು. ಮಾನಸಿಕ ರೋಗ ತಜ್ಞರ ಸಲಹೆ ಹಾಗೂ ಮನಶ್ಶಾಸ್ತ್ರಜ್ಞರೊಂದಿಗೆ ಆತ್ಮೀಯವಾಗಿ ಮಾತನಾಡುವುದು ಖಿನ್ನತೆಯಿಂದ ಹೊರಬರಲು ನೆರವಾಗುತ್ತದೆ. ಸೂಕ್ತ ಸಮಯದಲ್ಲಿ ನೆರವು ಪಡೆದುಕೊಂಡರೆ ಆತ್ಮಹತ್ಯೆಯಿಂದ ಪಾರಾಗಿ ಜೀವನವನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಟೆಲಿ-ಮಾನಸ ಸಹಾಯವಾಣಿ 14416 ಗಂಭೀರ ಸ್ವರೂಪದ ಮಾನಸಿಕ ಅಸ್ವಸ್ಥತೆ ಅಥವಾ ಸಣ್ಣ ಪ್ರಮಾಣದ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ವಿಜಯ ಮಹಾಂತೇಶ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಿ.ಬಿ. ಕಮ್ಮಾರ ಮಾತನಾಡಿ, ಬದುಕಿನ ಅಮೂಲ್ಯತೆಯನ್ನು ಅರಿತುಕೊಂಡು ಮೌಲ್ಯ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆತ್ಮಹತ್ಯೆಯಂತಹ ಕೆಟ್ಟ ವಿಚಾರಗಳು ಮನಸ್ಸಿನಲ್ಲಿ ಸುಳಿಯುವುದಿಲ್ಲ ಎಂದರು.
ಮುಖ್ಯ ವೇದಿಕೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಡಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ ಕುಬಸದ ಹಾಗೂ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹೇಮಾಕ್ಷಿ ತಳವಾರ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಎನ್.ಎಸ್. ಜೋಶಿ ಕಾರ್ಯಕ್ರಮ ನಿರೂಪಿಸಿದರು.
ಸಮಸ್ಯೆಗಳಿಂದ ಓಡಿಹೋಗುವುದಲ್ಲ; ಅವುಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವುದೇ ಬದುಕಿನ ಗೆಲುವು. ಆತ್ಮಹತ್ಯೆಯಲ್ಲ, ಜೀವನವನ್ನೇ ಆಯ್ದುಕೊಳ್ಳಿ.
— ಎಸ್.ಡಿ. ಬೆನ್ನೂರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ



