ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಬರುವ ಗಣೇಶ ಚತುರ್ಥಿಯನ್ನು ಸಾರ್ವಜನಿಕರು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಶಾಂತಿಯುತವಾಗಿ ಆಚರಿಸಬೇಕು ಎಂದು ಶಿರಹಟ್ಟಿ ಪಿಎಸ್ಐ ಈರಪ್ಪ ರಿತ್ತಿ ಹೇಳಿದರು.
ಬುಧವಾರ ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಈಗಾಗಲೇ ಡಿಜೆ ವ್ಯವಸ್ಥೆ ಹಾಗೂ ಹೆಚ್ಚಿನ ಡೆಸಿಬೆಲ್ ಶಬ್ದವರ್ಧಕ ಸಾಧನಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಿಒಪಿ ಗಣೇಶ ಮೂರ್ತಿಗಳ ಬಳಕೆಯನ್ನೂ ನಿಷೇಧಿಸಲಾಗಿದ್ದು, ಗಣೇಶೋತ್ಸವ ಮಂಡಳಿಗಳು ಕಡ್ಡಾಯವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸಂಬಂಧಿಸಿದ ಇಲಾಖೆಗಳ ಪೂರ್ವಾನುಮತಿ ಪಡೆಯಬೇಕು. ಸಂಘಟಕರು ಕಾವಲು ಸಮಿತಿ ರಚಿಸಿ ಸ್ವಯಂಸೇವಕರನ್ನು ನಿಯೋಜಿಸಬೇಕು. ಅವರಿಗೆ ಮಂಡಳಿಯ ಹೆಸರು ಇರುವ ಬ್ಯಾಡ್ಜ್, ಕೂಪನ್ ಹಾಗೂ ಗುರುತಿನ ಚೀಟಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ಪ್ರತಿಷ್ಠಾಪನಾ ಸ್ಥಳದಲ್ಲಿ ಮದ್ಯಪಾನ, ಧೂಮಪಾನ, ಜೂಜಾಟ, ಇಸ್ಪೀಟ್ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಕೋಮು ಪ್ರಚೋದನೆಗೆ ಕಾರಣವಾಗುವಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬೆಂಕಿ ನಂದಿಸುವ ಉಪಕರಣಗಳನ್ನು ಸ್ಥಳದಲ್ಲಿ ಇರಿಸಿಕೊಳ್ಳಬೇಕು ಎಂದರು.
ಪೊಲೀಸ್ ಇಲಾಖೆ ಹೊರಡಿಸುವ ಎಲ್ಲ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಶಾಂತಿಯುತವಾಗಿ ಹಬ್ಬ ಆಚರಿಸುವ ಮೂಲಕ ಇಲಾಖೆಗೆ ಸಹಕಾರ ನೀಡಬೇಕು ಎಂದು ಪಿಎಸ್ಐ ಈರಪ್ಪ ರಿತ್ತಿ ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಕೆ. ರಾಘವೇಂದ್ರ ರಾವ್, ಪಪಂ ಮುಖ್ಯಾಧಿಕಾರಿ ನಿಲೇಶ ಹಾದಿಮನಿ, ತಾಪಂ ಯೋಜನಾಧಿಕಾರಿ ಎಚ್.ಎನ್. ಕೊಂಡಿಕೊಪ್ಪ, ಹುಮಾಯೂನ್ ಮಾಗಡಿ, ಪರಮೇಶ ಪರಬ, ಸಂದೀಪ ಕಪ್ಪತ್ತನವರ, ಚಾಂದಸಾಬ ಮುಳಗುಂದ, ಅಜ್ಜುಗೌಡ ಪಾಟೀಲ, ಸುಧೀರ ಜಮಖಂಡಿ, ಜಕಾವುಲ್ಲಾ ಮಾಗಡಿ, ಅಲ್ಲಾಭಕ್ಷಿ ನಗಾರಿ, ಈರಣ್ಣ ಕೋಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಹಾಗೂ ಶಾಂತಿಯುತವಾಗಿ ಆಚರಿಸುವುದು ಎಲ್ಲರ ಜವಾಬ್ದಾರಿ. ಡಿಜೆ, ಪಿಒಪಿ ಮೂರ್ತಿಗಳ ಬಳಕೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ ಪೊಲೀಸ್ ಇಲಾಖೆ ಸೂಚಿಸುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
— ಈರಪ್ಪ ರಿತ್ತಿ, ಪಿಎಸ್ಐ, ಶಿರಹಟ್ಟಿ



