ವಿಜಯಸಾಕ್ಷಿ ಸುದ್ದಿ, ಗದಗ: ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಯೋಗ ಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ ತಿಂಗಳಾದ್ಯಂತ ಹಮ್ಮಿಕೊಂಡಿರುವ ‘ಗುರುವಂದನಾ ಸಂಭ್ರಮಾಚರಣೆ’ ಕಾರ್ಯಕ್ರಮದ ಅಂಗವಾಗಿ ಯೋಗ ಸೇವಾ ಶಿಕ್ಷಕರನ್ನು ಗುರುತಿಸಿ ರಾಜ್ಯ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೆ.11ರಂದು ಮೈಸೂರಿನ ಪತ್ರಿಕಾ ಭವನದಲ್ಲಿ ಯೋಗ ಸಾಧನೆ, ಬೋಧನೆ, ತರಬೇತಿ, ಪ್ರಸಾರ ಹಾಗೂ ಸೇವೆಯಲ್ಲಿ ತೊಡಗಿರುವ 14 ಯೋಗಾಚಾರ್ಯರಿಗೆ ‘ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-2026’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ವಿಶ್ವ ಯೋಗಾಶ್ರಮದ ಶ್ರೀ ಶ್ರೀ ನಿತ್ಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ ಸಮ್ಮುಖ ವಹಿಸಿದ್ದರು. ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಂಚಾಲಕ ಡಾ. ಪಿ.ಎನ್. ಗಣೇಶಕುಮಾರ್, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಮೋಹನ್, ಯೋಗ ಸ್ಪೋರ್ಟ್ಸ್ ಫೌಂಡೇಶನ್ ಖಜಾಂಚಿ ವಿವೇಕ್ ಹಾಗೂ ನಿರ್ದೇಶಕ ನಿಶಾಂತ್ ಉಪಸ್ಥಿತರಿದ್ದರು.
ಡಾ. ಪಿ.ಎನ್. ಗಣೇಶಕುಮಾರ್ ಮಾತನಾಡಿ, ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಯೋಗದ ಅಭಿವೃದ್ಧಿ ಹಾಗೂ ಪ್ರಸಾರಕ್ಕೆ ಮಹತ್ತರ ಕೊಡುಗೆ ನೀಡಿದ ಯೋಗಾಚಾರ್ಯ ಟಿ. ಕೃಷ್ಣಮಾಚಾರ್ಯ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಸ್ಥಾಪಿಸಲಾಗಿದೆ. ಗುರು ಪರಂಪರೆಯನ್ನು ಸ್ಥಿರವಾಗಿ ಮುಂದುವರಿಸುವುದು ಪ್ರಶಸ್ತಿಯ ಉದ್ದೇಶವಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಕೃಷ್ಣಪ್ಪ, ರಮೇಶಕುಮಾರ್ ಹಾಗೂ ಕೆ.ಎಸ್. ಪಲ್ಲೇದ ಮಾತನಾಡಿ, ಯೋಗವನ್ನು ಜೆನ್ ಅಲ್ಪಾ ಹಾಗೂ ಜೆನ್ ಝೀ ಸಮುದಾಯದ ಯುವಜನರಿಗೆ ತಲುಪಿಸಬೇಕು. ಶಾಲಾ-ಕಾಲೇಜುಗಳ ಪರೀಕ್ಷೆ ಹಾಗೂ ಪ್ರಮಾಣಪತ್ರಗಳಲ್ಲಿ ಯೋಗಕ್ಕೆ ಅಂಕಗಳನ್ನು ಕಡ್ಡಾಯಗೊಳಿಸಬೇಕು. ಯೋಗಾಸನ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಸಂಘಟಕರಿಗೆ ಗದುಗಿನ ಎಸ್.ವೈ.ಬಿ.ಎಂ.ಎಸ್. ಯೋಗ ಪಾಠಶಾಲೆ, ಬಸವ ಯೋಗ ಮಹಾವಿದ್ಯಾಲಯ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಗದಗ ಜಿಲ್ಲಾ ಯೋಗ ಒಕ್ಕೂಟ, ಗದಗ ಜಿಲ್ಲಾ ಅಮೇಚೂರ್ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್, ಬಸವ ಯೋಗ ಚಿಂತನ ಕೂಟ, ಶ್ರೀ ಕುಮಾರೇಶ್ವರ ಯೋಗ ಜೀಮ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಪರವಾಗಿ ಗದಗ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.



