ವಿಜಯಸಾಕ್ಷಿ ಸುದ್ದಿ, ಗದಗ:
ಸಾರ್ವಜನಿಕ ಕಾರ್ಯಗಳಿಗೆ ಜನಪ್ರತಿನಿಧಿಗಳ ಲೆಟರ್ ಹೆಡ್ ಬಳಕೆಯಾಗುವುದು ಸಾಮಾನ್ಯ. ಆದರೆ “ಇಂಥ ವಾಹನ ಯಾರೂ ಹಿಡಿಯಬೇಡಿ, ಯಾಕೆಂದರೆ ಅವನು ನಮ್ಮ ಪಕ್ಷದ ಕಾರ್ಯಕರ್ತ” ಎಂದು ಜನಪ್ರತಿನಿಧಿ ತನ್ನ ಲೆಟರ್ ಹೆಡ್‌ನಲ್ಲಿ ಬರೆದು ಸಹಿ ಹಾಕಿ ಕೊಡುವುದು ಮಾತ್ರ ವಿಚಿತ್ರ.
ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಇಂಥ ಅವಾಂತರಕ್ಕೆ ತುತ್ತಾಗುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಶಾಸಕ ಸಾರ್ವಜನಿಕ ಹಿತ ಕಾಯದ ಕೆಲಸಗಳಿಗೆ ತಮ್ಮ ಲೆಟರ್ ಹೆಡ್‌ನಲ್ಲಿ ಸಹಿ ಹಾಕಿ ಕೊಟ್ಟು ಪೇಚಿಗೆ ಸಿಲುಕಿದ್ದರು. ಈಗ ಮತ್ತೇ ಅಂಥ ಅವಾಂತರಕ್ಕೆ ಸಿಲುಕಿದ್ದಾರೆ.
ಆಗಿದ್ದಾದರೂ ಏನು?:
ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಬಸವರಾಜ ಎಂಬಾತನಿಗೆ ಶಾಸಕ ರಾಮಣ್ಣ ಲಮಾಣಿಯವರು ತಮ್ಮ ಲೆಟರ್ ಹೆಡ್ ಕೊಟ್ಟಿದ್ದಾರೆ. ಆ ಪತ್ರಕ್ಕೆ ವಿಷಯವನ್ನು ಓದಿಯೊ? ಓದದೆಯೊ? ಸಹಿ ಹಾಕಿದ್ದಾರೆ. ಅದರಲ್ಲಿದ್ದ ವಿಷಯ, ಜಿ.ಬಸವರಾಜ ಎಂಬುವವರು ನಮ್ಮ ಶಿರಹಟ್ಟಿ ಮತ ಕ್ಷೇತ್ರದವರು. ನಮ್ಮ ಪಕ್ಷದ ಕಾರ್ಯಕರ್ತರು, ಬಹಳ ಚಿರಪರಿಚಿತರು. ಇವರು AP 39 V 3517 ನೋಂದಣಿ ಸಂಖ್ಯೆಯ ಬೊಲೆರೊ ವಾಹನವನ್ನು ಹೊಂದಿದ್ದು, ಇದನ್ನು ಹಿಡಿಯಬಾರದು, ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂಬ ಸಾರವಿರುವ ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದು ಪತ್ರ ವೈರಲ್ ಆಗಿದೆ.
ಶಾಸಕ ಲಮಾಣಿಯವರ ಲೆಟರ್ ಹೆಡ್ ಬೇಕಾಬಿಟ್ಟಿಯಾಗಿ ಬಳಕೆ, ದುರ್ಬಳಕೆ ಆಗುತ್ತವೆ. ಯಾರೂ ಕೇಳಿದ್ರೂ ಖಾಲಿ ಲೆಟರ್ ಹೆಡ್‌ಗೆ ಸಹಿ ಮಾಡಿ ಕೊಡುತ್ತಾರೆ ಎಂಬ ಆರೋಪ ಕೇಳ ಬಂದಿದೆ.
“ಶಾಲಾ ಮಕ್ಕಳ ಕಾರ್ಯಕ್ರಮದಲ್ಲಿದ್ದಾಗ ಬಂದಿದ್ದ. ನಾನು ಗದ್ದಲದಲ್ಲಿ ಇದ್ದುದರಿಂದ ಪತ್ರಕ್ಕೆ ಸಹಿ ಹಾಕಿದೆ. ಮೋಸದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋಗಿರುವ ಅವನು ಯಾರು ಎಂಬುದು ನನಗೆ ಗೊತ್ತೇ ಇಲ್ಲ. ಈ ಬಗ್ಗೆ ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾಳೆ ಅವನನ್ನು ಹಿಡಿದು ತಂದು ವ್ಯವಸ್ಥೆ ಮಾಡ್ತಾರೆ.
-ರಾಮಣ್ಣ ಲಮಾಣಿ, ಶಾಸಕರು, ಶಿರಹಟ್ಟಿ.